ಶಿವಮೊಗ್ಗ : ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ನಂಬಿಕೆ ಇರುವ ಪ್ರತಿಯೊಬ್ಬರೂ PFI ಹೇಳಿಕೆ ಖಂಡನೆ ಮಾಡಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯ ಬಹುದಿನದ ಹಿಂದು ಸಮಾಜದ ಕನಸು ರಾಮಮಂದಿರ ನಿರ್ಮಾಣ. ಬಹಳ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರದ್ರೋಹಿ ಸಂಘಟನೆ PFI ಅವರ ಪ್ರಯತ್ನ ಬೆಳಕಿಗೆ ಬಂದಿದೆ. ಇದು ಹಿಂದೂ ಸಮಾಜಕ್ಕೆ ದೊಡ್ಡ ಆಘಾತವಾಗಿದೆ. PFI ಅಲ್ಲ, ರಾವಣನ ವಂಶಸ್ಥರು, ಜಿನ್ನಾ ವಂಶಸ್ಥರು ಬಂದರೂ ಅದು ಆಗಲ್ಲ ಎಂದರು.
ಇನ್ನು, ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ನಂಬಿಕೆ ಇರುವ ಪ್ರತಿಯೊಬ್ಬರೂ PFI ಹೇಳಿಕೆ ಖಂಡನೆ ಮಾಡಬೇಕು.ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್ ಎಲ್ಲರೂ ಖಂಡಿಸಬೇಕು. ಇದನ್ನು ಖಂಡಿಸದಿದ್ದರೆ ಅವರು ಅಯೋಗ್ಯರು. ಬಾಬ್ರಿ ಮಸೀದಿ ಗುಲಾಮಗಿರಿ ಸಂಕೇತದಂತಿತ್ತು. ಅಯೋಧ್ಯೆ ರಾಮ ಹುಟ್ಟಿದ ಜಾಗ ಹೀಗಾಗಿಯೇ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ರಾಮ ಮಂದಿರ ಉದ್ಘಾಟನೆಯನ್ನು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇಂತಹ ದೇಶದ್ರೋಹಿಗಳನ್ನು ಕೇವಲ ಜೈಲಿಗೆ ಕಳುಹಿಸುವುದಲ್ಲ. ಸಂವಿಧಾನ ತಿದ್ದುಪಡಿ ಮಾಡಿ ಸರಿಯಾದ ಶಿಕ್ಷೆ ಆಗಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಎಲ್ಲಿಯೇ ನಿಂತರೂ ಸೋಲುತ್ತಾರೆ. ಅವರ ಕಾಲದಲ್ಲಿ ಸಾಕಷ್ಟು ಹಿಂದು ಯುವಕರ ಕಗ್ಗೊಲೆ ನಡೆದಿದೆ. ಹಿಂದು ಧರ್ಮ ವಿರೋಧಿ ನೀತಿಯೇ ಅವರನ್ಜು ಸೋಲಿಸುತ್ತದೆ. ಹಿಂದು ಧರ್ಮಕ್ಕೆ ದ್ರೋಹ ಮಾಡಿದ್ದೇನೆ ಎಂಬ ಬಗ್ಗೆ ಮೊದಲು ಕ್ಷಮೆ ಕೇಳಲಿ ಎಂದರು.