Monday, December 23, 2024

ಅಂದು ರಾಕಿಭಾಯ್ ರಂಗು.. ಇಂದು ರಿಷಬ್ ಶೆಟ್ಟಿ ಗುಂಗು

ಒಂದು ರೆಕಾರ್ಡ್​ ಬ್ರೇಕ್ ಆಗೋಕೆ ಮತ್ತೊಂದು ನ್ಯೂ ರೆಕಾರ್ಡ್​ ಆಗಲೇಬೇಕು. ಅಫ್ ಕೋರ್ಸ್​ ಕೆಜಿಎಫ್ ಅನ್​ಬ್ರೇಕಬಲ್ ರೆಕಾರ್ಡ್​. ಆದ್ರೂ ಸಹ, ಇದೀಗ ಭಾರತೀಯ ಚಿತ್ರರಂಗದಲ್ಲಿ ಟ್ರೆಂಡಿಂಗ್​ನಲ್ಲಿರೋದು ಮಾತ್ರ ಕಾಂತಾರ & ರಿಷಬ್ ಶೆಟ್ರು. ಯೆಸ್.. ಇಂತಹ ದೃಶ್ಯಕಾವ್ಯ ಕಟ್ಟೋಕೆ ಅವ್ರಿಗೆ ಸ್ಫೂರ್ತಿಯಾದ ಲೆಜೆಂಡ್ಸ್ ಯಾರು ಅನ್ನೋದನ್ನ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್. ನೀವೇ ಓದಿ.

  • ದೇಶದ ಮೂಲೆ ಮೂಲೆಗೆ ಹಬ್ಬಿತು ಕಾಂತಾರದ ಅಸಲಿ ಕಿಚ್ಚು
  • ಅಣ್ಣಾವ್ರು, ವಿಷ್ಣು, ಶಂಕ್ರಣ್ಣ, ಉಪ್ಪಿಯೇ ಸ್ಫೂರ್ತಿ ಎಂದ ಶೆಟ್ರು

ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ‌. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ. ಹೀಗಂತ ರಿಷಬ್ ಶೆಟ್ಟಿ 2021ರ ಆಗಸ್ಟ್ 6ರಂದು ಒಂದು ಪೋಸ್ಟ್ ಮಾಡ್ತಾರೆ. ಅದೇ ಕಾಂತಾರ.

ನಿನ್ನೊಳಗಿನ ಕಿಚ್ಚು ನಿನ್ನನ್ನೇ ಸುಡದಿರಲಿ ಅನ್ನೋದು ಚಿತ್ರದ ಡೈಲಾಗ್ ಆದ್ರೂ, ಸದ್ಯ ಕಾಂತಾರ ಕಿಚ್ಚು ಇಡೀ ಭಾರತೀಯ ಚಿತ್ರರಂಗಕ್ಕೆ ಹತ್ತಿದೆ. ಚಿತ್ರದ ಮೇಕಿಂಗ್, ಪಾತ್ರಗಳು, ಕರಾವಳಿಯ ಆಚಾರ, ನಂಬಿಕೆಗಳು ಹಾಗೂ ರಿಷಬ್ ಶೆಟ್ಟಿಯ ಟೆರಿಫಿಕ್ ಪರ್ಫಾಮೆನ್ಸ್. ಹೀಗೆ ಎಲ್ಲವೂ ಚಿತ್ರದ ಗಮ್ಮತ್ತು ಹೆಚ್ಚಿಸಿವೆ. ಕನ್ನಡದಲ್ಲಿ ಮಾತ್ರ ವರ್ಲ್ಡ್​ವೈಡ್ ರಿಲೀಸ್ ಆದ ಕಾಂತಾರ, ಇದೀಗ ಕಾಡ್ಗಿಚ್ಚಿನಂತೆ ಆನ್ ಡಿಮ್ಯಾಂಡ್ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗ್ತಿದೆ.

ಬಾಕ್ಸ್ ಆಫೀಸ್​ನಲ್ಲಿ ಯಶಸ್ವಿ ನೂರು ಕೋಟಿ ಕ್ಲಬ್​ನತ್ತ ಮುನ್ನುಗ್ಗುತ್ತಿದೆ ಈ ಸೆಲೆಬ್ರೇಷನ್ ಆಫ್ ಕಲ್ಚರ್. ಸಿಂಗಾರ ಸಿರಿಯ ರಂಗು ಗಂಧದ ಪರಿಮಳದಂತೆ ಎಲ್ಲೆಡೆ ಹರಡುತ್ತಿದೆ. ಪ್ರಭಾಸ್, ರಾಣಾ ಮೆಚ್ಚಿದ್ದಾಯ್ತು. ಹೊಂಬಾಳೆ ಫಿಲಂಸ್​ನ ಈ ಡಿವೋಷನಲ್ ಬ್ಲಾಕ್ ಬಸ್ಟರ್​ನ ಸೂಪರ್ ಸ್ಟಾರ್ ರಜನಿಕಾಂತ್ ಅಳಿಯ ನಟ ಧನುಷ್ ಕೂಡ ಹಾಡಿ ಹೊಗಳಿದ್ದಾರೆ.

ಒಂದ್ಕಡೆ ರಿಷಬ್ ನಮ್ಮ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನ ಪರಭಾಷೆಗಳಲ್ಲಿ ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ರೆ, ಮತ್ತೊಂದ್ಕಡೆ ಅಲ್ಲಿನ ಸಂದರ್ಶಕರೇ ಇವ್ರ ಕಾಲಿಗೆ ಬಿದ್ದು ಇವ್ರನ್ನ ದೇವರಂತೆ ಕಾಣ್ತಿರೋದು ಇಂಟರೆಸ್ಟಿಂಗ್ ಅನಿಸಿದೆ. ಅಂದು ಯಶ್ ಎಳೆದ ತೇರನ್ನ ಇಂದು ರಿಷಬ್ ಶೆಟ್ಟಿ ಮತ್ತಷ್ಟು ಮುಂದಕ್ಕೆ ತರೋ ಪ್ರಯತ್ನ ಮಾಡಿದ್ದಾರೆ. ಮುಂಬೈನಲ್ಲಿ ಶೆಟ್ರ ಹವಾ ಸಖತ್ ಜೋರಿದೆ. ಅನುಪಮಾ ಚೋಪ್ರಾ ಸಂದರ್ಶನದಲ್ಲಿ ನಮ್ಮದಿನ್ನೂ ಅಂಬೆಗಾಲು. ನಾವೇನೂ ಸಾಧಿಸಿಲ್ಲ. ನಮ್ಮ ಮಣ್ಣಿನ ಸೊಗಡು, ಸೊಬಗನ್ನ ಪ್ರೇಕ್ಷಕರಿಗೆ ಉಣಬಡಿಸೋ ಪ್ರಯತ್ನ ಮಾಡ್ತಿದ್ದೇವಷ್ಟೇ ಎಂದಿದ್ದಾರೆ. ಅಷ್ಟೇ ಅಲ್ಲ, ನಮಗೆಲ್ಲಾ ನಮ್ಮ ಲೆಜೆಂಡ್ಸ್ ಸ್ಫೂರ್ತಿ ಅಂದಿದ್ದಾರೆ ರಿಷಬ್.

ಶಂಕರ್​ನಾಗ್, ಉಪೇಂದ್ರ, ಕಾಶಿನಾಥ್, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಅವ್ರು ಲೆಜೆಂಡ್ ಡೈರೆಕ್ಟರ್ಸ್​. ಪರಭಾಷಿಗರು ನಮ್ಮಲ್ಲಿ ಬಂದು ಅವ್ರ ಸಿನಿಮಾಗಳ ರೈಟ್ಸ್ ಪಡೆದು ರಿಮೇಕ್ ಮಾಡಿದ್ದಾರೆ. ಡಾ ರಾಜ್​ಕುಮಾರ್, ವಿಷ್ಣುವರ್ಧನ್​ರಂತಹ ಲೆಜೆಂಡ್ಸ್ ಇದ್ರು. ಅವರೇ ನಮಗೆಲ್ಲಾ ಸ್ಫೂರ್ತಿ ಎಂದ ಶೆಟ್ರು, 11 ವರ್ಷದಲ್ಲಿ ಶಂಕರ್ ನಾಗ್ ಸರ್ ಮಾಡಿದ ಸಾಧನೆ ಅಷ್ಟಿಷ್ಟಲ್ಲ. 40ಕ್ಕೂ ಅಧಿಕ ಮಾಲ್ಗುಡಿ ಡೇಸ್ ಎಪಿಸೋಡ್ಸ್, 70ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ, 11 ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಇದೆಲ್ಲವೂ ವಂಡರ್​ಫುಲ್ ಜರ್ನಿ ಅಂತ ನಮ್ಮ ಪರಂಪರೆಯನ್ನ ಒಂದೇ ಒಂದು ನಿಮಿಷದಲ್ಲಿ ಹೇಳೋದ್ರಲ್ಲಿ ಯಶಸ್ವಿ ಆಗಿದ್ದಾರೆ.

ಒಟ್ಟಾರೆ ಕಾಂತಾರ ನಿಜಕ್ಕೂ ದಂತಕಥೆ. ಅದೊಂದು ಬಣ್ಣಿಸಲಾಗದ ಭಾವ. ನಮ್ಮ ಪರಂಪರೆ. ನಮ್ಮ ಪ್ರಕೃತಿ. ನಮ್ಮ ಆಚಾರ & ವಿಚಾರ. ನಮ್ಮ ಮಣ್ಣಿನ ಹೊನ್ನಿನ ಕಥೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES