Monday, November 25, 2024

ರೊಟ್ಟಿ ಜಾತ್ರೆ; 32 ಕ್ವಿಂಟಾಲ್ ಸಜ್ಜೆ ರೊಟ್ಟಿ, 10 ಕ್ವಿಂಟಾಲ್ ಜೋಳದ ರೊಟ್ಟಿ ಸಿದ್ದಪಡಿಸಿದ ಭಕ್ತರು.!

ಕಲಬುರಗಿ; ದೇವಸ್ಥಾನ. ಮಠಗಳ ಜಾತ್ರೆ ಅಂದ್ರೆ ಅದರದ್ದೆ ಆದ ವಿಶೇಷತೆಗಳಿರುತ್ತವೆ.‌ ಹಾಗೆಯೇ ಕೋಮು ಸೌಹಾರ್ದತೆ ಸಾರುವ ಕಲಬುರಗಿಯ ವಿಶ್ವರಾಧ್ಯ ತಪೋವನ ಮಠದ ಜಾತ್ರೆಯ ವಿಶೇಷತೆಯೇ ರೊಟ್ಟಿ. ಪ್ರತಿ ವರ್ಷದಂತೆ ಈ ವರ್ಷವೂ ತಪೋವನದಲ್ಲಿ ಭಕ್ತಿ ಭಾವದಿಂದ ರೊಟ್ಟಿ ಜಾತ್ರೆ ವೈಭವದಿಂದ ಜರುಗಿದೆ.

ಒಂದೆಡೆ ರಾಶಿಗಟ್ಟಲೇ ಕಾಣ್ತಿರುವ ರೊಟ್ಟಿ. ಇನ್ನೂಂದೆಡೆ ಭಕ್ತಿ ಭಾವದಲ್ಲಿ ತಲ್ಲಿನರಾಗಿರುವ ಸಾವಿರಾರು ಭಕ್ತಗಣ.ಮತ್ತೊಂದೆಡೆ ಭಜ್ಜಿ, ಖಡಕ್ ರೊಟ್ಟಿ ಸವಿಯುತ್ತಿರುವ ಭಕ್ತರು. ಇದು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಶಾಖಾಪುರದ ವಿಶ್ವರಾಧ್ಯ ತಪೋವನ ಶಾಖಾ ಮಠದ ರೊಟ್ಟಿ ಜಾತ್ರೆಯ ವಿಶೇಷ.

ಕೋಮು ಸೌಹಾರ್ದತೆ ಸಾರುವ ವಿಶ್ವರಾಧ್ಯ ತಪೋವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಲಿಂಗೈಕ್ಯ ಶ್ರೀ ಸಿದ್ದರಾಮ ಶಿವಯೋಗಿಗಳ 72 ನೇ ಪುಣ್ಯಸ್ಮರಣೆ ನಿಮಿತ್ತ ಭಕ್ತಿ, ಭಾವ ವೈಭವದಿಂದ ರೊಟ್ಟಿ ಜಾತ್ರೆ ನಡೆಯುತ್ತಿದೆ. ರೊಟ್ಟಿ, ಭಜ್ಜಿ ಪಲ್ಯ ಜಾತ್ರೆಯಲ್ಲಿ ಕಲಬುರಗಿ ಸೇರಿದಂತೆ ಅಕ್ಕ ಪಕ್ಕದ ಸಾವಿರಾರು ಭಕ್ತರು ಪಾಲ್ಗೊಂಡಿದ್ಧಾರೆ. ಈ ಜಾತ್ರೆಯ ವಿಶೇಷ ಅಂದ್ರೆ ಇಲ್ಲಿ ಕೇವಲ ಖಡಕ್ ರೊಟ್ಟಿ, ಎಲ್ಲಾ ತರಹದ ಕಾಳು ತರಕಾರಿಗಳಿಂದ ಸಿದ್ದಪಡಿಸುವ ಭಜ್ಜಿ ಪಲ್ಯ. 24 ಗಂಟೆಗಳ ಕಾಲ ನಡೆಯುವ ರೊಟ್ಟಿ ಜಾತ್ರೆಯಲ್ಲಿ ಸಾವಿರಾರು ಭಕ್ತಗಣ ಪಾಲ್ಗೊಂಡು ರೊಟ್ಡಿ, ಭಜ್ಜಿ ಪಲ್ಯ ಪ್ರಸಾದ ಸವಿದು ವಿಶ್ವರಾಧ್ಯ, ಸಿದ್ದರಾಮ ಶಿವಯೋಗಿಗಳ ಕೃಪೆಗೆ ಪಾತ್ರರಾದರು.

ಮಠ ಹಾಗೂ ಭಕ್ತರಿಂದ ಜರುಗುವ ಈ ವಿಶೇಷ ರೊಟ್ಟಿ ಜಾತ್ರೆಯಲ್ಲಿ ಈ ವರ್ಷ 32 ಕ್ವಿಂಟಲ್ ಸಜ್ಜೆ ರೊಟ್ಟಿ, 10 ಕ್ವಿಂಟಲ್ ಬಿಳಿ ಜೊಳ ರೊಟ್ಟಿಗಳನ್ನ ಸಿದ್ದಪಡಿಸಲಾಗಿದೆ. ರೊಟ್ಟಿ ಜಾತ್ರೆ ನಿಮಿತ್ತ ಹದಿನೈದು ದಿನಗಳ ಮುಂಚೆಯಿಂದಲೇ ಶಾಖಾಪುರದ ಮಹಿಳೆಯರು ಲಕ್ಷಾಂತರ ರೊಟ್ಟಿಗಳನ್ನು ಬಡಿದು ಸಿದ್ದಪಡಿಸಿದ್ದಾರೆ. ಅಲ್ಲದೆ ಬೇರೆ ಬೇರೆ ಭಾಗದ ಭಕ್ತರು ಕೂಡ ಜಾತ್ರೆಗಾಗಿಯೇ ಸಾವಿರ ರೊಟ್ಟಿಗಳನ್ನ ಸಿದ್ದಪಡಿಸಿಕೊಂಡು ಜಾತ್ರೆಗೆ ತರುತ್ತಾರೆ.

24 ಗಂಟೆಗಳ ಕಾಲ ಜರುಗುವ ಈ ರೊಟ್ಟಿ ಜಾತ್ರೆಯಲ್ಲಿ ರಾತ್ರಿ ಭಕ್ತರು ರೊಟ್ಟಿ, ಭಜ್ಜಿ ಪಲ್ಯ ಪ್ರಸಾದ ಪಡೆಯುತ್ತಾರೆ. ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿರುವ ಈ ರೊಟ್ಟಿ ಜಾತ್ರೆಯಲ್ಲಿ ಪಂಕ್ತಿ ಭೇದ ಇಲ್ಲದೆ ಭಕ್ತರು ದಾಸೋಹ ಮನೆಯಲ್ಲಿ ನೆಲದ ಮೇಲೆ ಕುಳಿತು ರೊಟ್ಟಿ, ಭಜ್ಜಿ ಪಲ್ಯ ಪ್ರಸಾದ ಸೇವಿಯೋದು ಮತ್ತೊಂದು ವಿಶೇಷ. ವರ್ಷದಿಂದ ವರ್ಷಕ್ಕೆ ಈ ರೊಟ್ಟಿ ಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹರಿದುಬರ್ತಿದ್ದಾರೆ.

ಶ್ರೀ ಸಿದ್ದರಾಮ ಶಿವಯೋಗಿಗಳ 72 ನೇ ಪುಣ್ಯಸ್ಮರಣೆ ನಿಮಿತ್ತ ವಿಶೇಷ ಪೂಜೆ ಜರುಗಿದವು.. ರೊಟ್ಟಿ ಜಾತ್ರೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಒಟ್ನಲ್ಲಿ ವಿಶೇಷ ರೊಟ್ಟಿ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡು ಶ್ರೀ ಸಿದ್ದರಾಮ ಶಿವಯೋಗಿಗಳ ಭಕ್ತಿಗೆ ಪಾತ್ರರಾದರು.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES