ಸ್ಫೂರ್ತಿದಾಯಕ ಮಾತುಗಳಿಂದ ಲೈಫ್ ಗುರು ಆಗಿ ಎಲ್ಲರ ಮನೆ & ಮನಸ್ಸು ಮುಟ್ಟಿರೋ ರಮೇಶ್ ಅರವಿಂದ್ ಅವ್ರು ಯಕ್ಷಗಾನ ಕಲಾವಿದನಾಗಿ ಮಿಂಚ್ತಿದ್ದಾರೆ. ಅರೇ ಯಕ್ಷಗಾನ ಗೆಟಪ್ ಯಾವ ಸಿನಿಮಾಗಾಗಿ..? ಆ ಕಲೆ ಮೇಲೆ ಅವ್ರಿಗ್ಯಾಕೆ ಅಷ್ಟೊಂದು ಒಲವು ಅನ್ನೋದ್ರ ಇಂಟರೆಸ್ಟಿಂಗ್ ಮ್ಯಾಟರ್ ಇಲ್ಲಿದೆ. ನೀವೇ ಓದಿ.
- ಡಾಕ್ಟರೇಟ್ ಬೆನ್ನಲ್ಲೇ ಲೈಫ್ ಗುರು ರಮ್ಮಿಗೆ ಮತ್ತೊಂದು ಗರಿ
- ಭರದಿಂದ ಸಾಗ್ತಿದೆ ಶಿವಾಜಿ ಸುರತ್ಕಲ್ ಸೀಕ್ವೆಲ್ನ ಶೂಟಿಂಗ್
- ನಟನೆ, ನಿರೂಪಣೆ, ಮೋಟಿವೇಷನಲ್ ಸ್ಪೀಚ್ಗಳಲ್ಲಿ ಬ್ಯುಸಿ..!
ರಮೇಶ್ ಅರವಿಂದ್ ಅಂದಾಕ್ಷಣ ತ್ಯಾಗರಾಜ್ ಪಾತ್ರಗಳೇ ನೆನಪಾಗುತ್ವೆ. ಆದ್ರೆ ಅವ್ರ ಮನೋಜ್ಞ ಅಭಿನಯ ಎಲ್ಲರ ಮನಸೂರೆಗೊಂಡಿದೆ. ಅವ್ರ ಹಾವ, ಭಾವ, ಆಂಗಿಕ ಭಾಷೆ, ಎಮೋಷನ್ಸ್ನ ಎಕ್ಸಿಕ್ಯೂಟ್ ಮಾಡೋ ಶೈಲಿ ನಿಜಕ್ಕೂ ವರ್ಣನಾತೀತ. ಬರೀ ನಟನೆಗಷ್ಟೇ ಸೀಮಿತವಾಗದ ಇವ್ರು, ಬೇರೆ ಬೇರೆ ಆಯಾಮಗಳಲ್ಲಿ ದೊಡ್ಡ ಛಾಪನ್ನೊತ್ತಿದ್ದಾರೆ.
ನಟನೆ, ನಿರ್ದೇಶನ, ಬರವಣಿಗೆಯ ಜೊತೆಗೆ ಸ್ಫೂರ್ತಿದಾಯಕ ಭಾಷಣಗಳಿಂದ ಹಾಗೂ ವಿಡಿಯೋಗಳ ಮೂಲಕ ಲಕ್ಷಾಂತರ ಮಂದಿಯ ಲೈಫ್ ಗುರು ಆಗಿ ಮಿಂಚ್ತಿದ್ದಾರೆ. ಜೀವನದಲ್ಲಿ ಹತಾಶರಾಗಿರೋ ಹಾಗೂ ಜೀವನವೇ ಸಾಕಪ್ಪ ಅಂತ ಬೇಸರಗೊಂಡಿರೋ ಮನಸ್ಸುಗಳನ್ನ ಹುರಿದುಂಬಿಸೋ ಅಂತಹ ಅವ್ರ ಸ್ವಚ್ಚ ಕನ್ನಡದ ಮುಲಾಮಿನ ಮಾತುಗಳು ಸಾಕಷ್ಟು ಮಂದಿಗೆ ಸ್ಫೂರ್ತಿ ಆಗಿವೆ.
ಸಿನಿಮಾಗಳಲ್ಲಿ ಬ್ಯುಸಿ ಇದ್ದುಕೊಂಡೇ ಕಿರುತೆರೆಯಲ್ಲೂ ನಂಬರ್ ಒನ್ ನಿರೂಪಕರಾಗಿ ಕಮಾಲ್ ಮಾಡಿದವ್ರು ರಮೇಶ್ ಅರವಿಂದ್. ರೀಸೆಂಟ್ ಆಗಿ ಅವ್ರ ಸಾಧನೆಯನ್ನ ಗುರ್ತಿಸಿ, ಹಂಪಿ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ವೈದ್ಯರಂತೆ ಸದಾ ಮನಸ್ಸುಗಳನ್ನ ಮಾತಿನಿಂದಲೇ ಹಗುರಾಗಿಸ್ತಿದ್ದ ರಮೇಶ್ ಅರವಿಂದ್ ಅಕ್ಷರಶಃ ಡಾಕ್ಟರ್ ರಮೇಶ್ ಅರವಿಂದ್ ಆಗಿದ್ದು ನಿಜಕ್ಕೂ ಖುಷಿಯ ವಿಚಾರ.
ಒಂದ್ಕಡೆ ಅವ್ರದ್ದೇ ನಿರ್ದೇಶನದ ಬೈರಾದೇವಿ ಸಿನಿಮಾ ರಿಲೀಸ್ಗೆ ರೆಡಿಯಾಗ್ತಿದೆ. ಮತ್ತೊಂದ್ಕಡೆ ಬ್ಲಾಕ್ ಬಸ್ಟರ್ ಹಿಟ್ ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್ ಸಿನಿಮಾದ ಶೂಟಿಂಗ್, ಡಬ್ಬಿಂಗ್ ಕಾರ್ಯಗಳು ಕೂಡ ಭರದಿಂದ ಸಾಗ್ತಿವೆ. ಈ ಮಧ್ಯೆ ಅವ್ರಿಗೆ ಪತಿಷ್ಠಿತ ಡಾ. ಶಿವರಾಮ ಕಾರಂತ ಪ್ರಶಸ್ತಿ ಕೂಡ ಒಲಿದಿದೆ. ಉಡುಪಿಯಲ್ಲಿ ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಮೇಶ್ ಅರವಿಂದ್ ಭಾಗಿಯಾಗಿ, ಗೌರವ ಸ್ವೀಕರಿಸಿದ್ರು. ಅಲ್ಲದೆ, ಕಾರಂತರ ಪ್ರತಿಮೆಗೆ ನಮಸ್ಕರಿಸಿ, ಅವ್ರ ಪ್ರತಿಮೆ ಜೊತೆ ಏಕಾಂತವಾಗಿ ಒಂದಷ್ಟು ಸಮಯ ಕಳೆದರು.
ಅದೇ ಕರಾವಳಿಯ ದೇಸಿ ಕಲೆಯಾದ ಯಕ್ಷಗಾನದ ಮೇಲೆ ಒಲವು ತೋರಿದ ಅವ್ರು, ಥೇಟ್ ಯಕ್ಷಗಾನ ಕಲಾವಿದರಾಗಿ ಬಣ್ಣ ಹಚ್ಚಿದ್ರು. ಅಲ್ಲದೆ, ವಿವಿಧ ಭಂಗಿಗಳಲ್ಲಿ ಒಂದೊಳ್ಳೆ ಫೋಟೋಶೂಟ್ ಕೂಡ ಮಾಡಿಸಿದ್ರು. ಮೇಕಪ್ನಿಂದ ಹಿಡಿದು, ಆ ಕಲೆಯ ಪ್ರದರ್ಶನ ಎಷ್ಟು ಕಷ್ಟ ಅನ್ನೋದನ್ನ ಅರಿವು ಮೂಡಿಸೋಕೆ ಹಾಗೂ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಸಂದೇಶ ಕೂಡ ಸಾರಿದ್ರು.
ಒಟ್ಟಾರೆ ಇವ್ರು ತಮ್ಮನ್ನ ಸದಾ ಹೊಸತನಕ್ಕೆ ಒಡ್ಡಿಕೊಳ್ತಾನೇ ಇರ್ತಾರೆ. ಚಿಂತನ , ಮಂಥನದ ಬೀಜಗಳನ್ನು ಬಿತ್ತುತ್ತಾ, ಮನರಂಜನೆಯ ಜೊತೆ ಸಮಾಜಕ್ಕೆ ಪಾಠ ಮಾಡೋ ಮಾಸ್ಟರ್ ಕೂಡ ಆಗಿದ್ದಾರೆ. ಇವ್ರ ಈ ನಿಸ್ವಾರ್ಥ ಕಲಾಸೇವೆ ಹೀಗೆ ಮುಂದುವರೆಯಲಿ ಅಂತ ಹೇಳ್ತಾ ಕಾರಂತ ಪ್ರಶಸ್ತಿ ಪಡೆದ ರಮೇಶ್ರಿಗೆ ಶುಭಾಶಯ ಕೋರೋಣ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ