ಬೆಂಗಳೂರು : ಆಟೋಗೆ ಪರವಾನಗಿ ಪಡೆದುಕೊಳ್ಳದೇ ಆಟೋ ಸೇವೆ ನೀಡಿ ಜನರಿಂದ ಸುಲಿಗೆ ಮಾಡ್ತಿದ್ದ ಓಲಾ ಊಬರ್ ವಿರುದ್ಧ ಸಾರಿಗೆ ಇಲಾಖೆ ಸಮರ ಸಾರಿತ್ತು. ಜನರಿಂದ ಹೆಚ್ಚು ದರ ಪೀಕುತ್ತಿದ್ದ ಓಲಾ ಊಬರ್ ರ್ಯಾಪಿಡೋ ಆಟೋ ಸೇವೆಯನ್ನು ಸಾರಿಗೆ ಇಲಾಖೆ ನಿರ್ಬಂಧಿಸಿತ್ತು. ಆದ್ರೆ, ಈ ಆದೇಶ ರದ್ದು ಕೋರಿ ಓಲಾ ಮತ್ತು ಊಬರ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿದ್ವು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಸಾರಿಗೆ ಇಲಾಖೆ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ. 2021ರ ಸಾರಿಗೆ ಇಲಾಖೆ ನಿಗದಿಪಡಿಸಿರುವ ದರದಂತೆ ಓಲಾ ಮತ್ತು ಉಬರ್ ಆಟೋ ಸೇವೆ ನೀಡಲು ಹೈಕೋರ್ಟ್ ಅನುಮತಿಸಿದೆ.
ಇನ್ನು ಓಲಾ ಮತ್ತು ಉಬರ್ ಸಂಸ್ಥೆಗಳು ಜನರಿಗೆ ಅನುಕೂಲಕರವಾದ ದರ ನಿಗದಿಪಡಿಸಬೇಕು. 06-07-2021ರಲ್ಲಿ ಸಾರಿಗೆ ಇಲಾಖೆ ಹೊರಡಿಸಿದ ಆದೇಶ ಪಾಲನೆ ಮಾಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಜೊತೆಗೆ ಹೆಚ್ಚುವರಿ ಸರ್ವಿಸ್ ಚಾರ್ಜ್ ವಿಧಿಸಿದ್ರೆ ಅದನ್ನು ನ್ಯಾಯಾಲಯದ ಗಮನಕ್ಕೆ ತರಬೇಕೆಂದು ಹೈಕೋಟ್೯ ಖಾಸಗಿ ಓಲಾ ಉಬರ್ ಹಾಗೂ ರ್ಯಾಪಿಡ್ ಕಂಪನಿಗಳಿಗೆ ಸೂಚಿಸಿದೆ. ಜೊತೆಗೆ ನವೆಂಬರ್ 7ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಒಟ್ಟಿನಲ್ಲಿ ಜನರಿಂದ ಸುಲಿಗೆ ಮಾಡಿ ಸಾರಿಗೆ ಇಲಾಖೆಯಿಂದ ಬ್ಯಾನ್ ಆಗಿದ್ದ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿ ತಾತ್ಕಾಲಿಕ ರಿಲೀಫ್ ಪಡೆದುಕೊಂಡಿವೆ. ಹೈಕೋರ್ಟ್ ಸೇವೆ ಮುಂದುವರಿಸಲು ಅವಕಾಶ ಕೊಟ್ಟಿದ್ರೂ ದರವನ್ನು ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಲು ಸೂಚಿಸಿದೆ. ಇದನ್ನು ಕಂಪನಿಗಳು ಫಾಲೋ ಮಾಡ್ತಾವಾ ಅನ್ನೋದು ಸದ್ಯ ಇರೋ ಪ್ರಶ್ನೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.