ಬೆಂಗಳೂರು : ಗೃಹ ಸಚಿವ ಆರಗ ಜ್ಞಾನೇಂದ್ರ ಹಿಜಾಬ್ ತೀರ್ಪಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹಿಜಾಬ್ ಸಂಬಂಧ ಸುಪ್ರೀಂ ಕೋರ್ಟ್ನ ಇಬ್ಬರು ಜಡ್ಜ್ಗಳು ವಿಭಿನ್ನ ತೀರ್ಪು ನೀಡಿದ್ದಾರೆ.
CJI ಪೀಠಕ್ಕೆ ಹಿಜಾಬ್ ಪ್ರಕರಣ ವರ್ಗಾವಣೆ ಆಗಿದೆ ಹಾಗೂ CJI ಪೀಠ ನೀಡುವ ತೀರ್ಪಿಗೆ ಸರ್ಕಾರ ಬದ್ಧವಾಗಿರುತ್ತೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಹಿಜಾಬ್ ಬಗ್ಗೆ ಭಿನ್ನಾಭಿಪ್ರಾಯ ಇರುವ ಆದೇಶಗಳು ಹೊರ ಬಂದಿವೆ. ಮುಂದೆ ಮುಖ್ಯ ನ್ಯಾಯಮೂರ್ತಿಗಳ ನಿರ್ಧಾರ ಮಹತ್ವದ್ದಾಗಿದೆ. ನ್ಯಾಯಮೂರ್ತಿ ಹೇಮಂತ್ ಗುಪ್ತಾ ಅವರು ಹಿಜಾಬ್ ಮನವಿಯನ್ನು ವಜಾಗೊಳಿಸಿದ್ದಾರೆ ಎಂದರು.
ಇನ್ನು, ನ್ಯಾಯಮೂರ್ತಿ ಧುಲಿಯಾ ಅವರು ನಾನು ಕರ್ನಾಟಕ ಹೈಕೋರ್ಟ್ ಆದೇಶವನ್ನು ಬದಿಗಿರಿಸಿದ್ದೇನೆ ಮತ್ತು ಸರ್ಕಾರಿ ಆದೇಶವನ್ನು ರದ್ದುಗೊಳಿಸಿದ್ದೇನೆ ಎಂಬ ತೀರ್ಪನ್ನು ನೀಡಿದ್ದಾರೆ. ಕರ್ನಾಟಕ ಸರ್ಕಾರ ವಿದ್ಯಾರ್ಥಿಗಳು ಸರ್ವತೋಮುಖ ಬೆಳವಣಿಗೆಯ ಹಿತ ದೃಷ್ಟಿಯಿಂದ ಶಾಲೆಗಳಲ್ಲಿ ನಿಗದಿಪಡಿಸಿದ ಸಮವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದೆ. ಇದರ ಬಗ್ಗೆ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ತೀರ್ಪಿನ ಕುರಿತು ಕಾನೂನು ತಜ್ಞರ ಸಲಹೆ ಪಡೆದು ಕೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದರು.