ಮೈಸೂರು : ತುಂಡು ಭೂಮಿಗೂ ಬಂಗಾರದ ಬೆಲೆ ಬಂದಿದೆ. ಕಂಡ ಕಂಡವರ ಖಾಲಿ ಭೂಮಿಗೆ ಬೇಲಿ ಸುತ್ತಿದ ಅದೆಷ್ಟೋ ಮಂದಿ ಕಿರಾತಕರು ಇನ್ನೂ ಕಂಬಿ ಎಣಿಸುತ್ತಿದ್ದಾರೆ. ಆದ್ರೆ ಅಕ್ರಮ ಹಾಗೂ ನಕಲಿ ದಾಖಲೆ ಸೃಷ್ಟಿಸುತ್ತಿದ್ದ ಭೂಗಳ್ಳರ ಹಗರಣ ಬಯಲಿಗೆ ಎಳೆಯಬೇಕಾದ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೇ ಅಕ್ರಮ ಸುಳಿಯಲ್ಲಿ ಸಿಲುಕಿದ್ದಾರೆ. ಇದು ಮೈಸೂರು ತಾಲೂಕಿನ ಕಂದಾಯ ಇಲಾಖೆ ಬೆಲಿಯೇ ಎದ್ದು ಹೊಲಮೇಯ್ದ ಕಥೆ.
ಅಂದಹಾಗೆ ಇವ್ರು ಮೈಸೂರು ತಾಲೂಕಿನ ತಹಶೀಲ್ದಾರ್ ಗಿರೀಶ್. ಶಿವಮೊಗ್ಗ ಸೇರಿದಂತೆ ಇತರೆ ಕಡೆಗಳಲ್ಲಿ ತಹಶೀಲ್ದಾರ್ ಆಗಿ ಕೆಲಸ ನಿರ್ವಹಿಸಿ ಇತ್ತೀಚೆಗಷ್ಟೆ ಮೈಸೂರಿಗೆ ವರ್ಗಾವಣೆ ಆದವ್ರು. ಇನ್ನೂ ಈತ ರಾಘವೇಂದ್ರ ನಾಯಕ್ ಕಸಬಾ ಹೋಬಳಿ ರೆವಿನ್ಯೂ ಇನ್ಸ್‌ಪೆಕ್ಟರ್. ಮತ್ತೊಬ್ಬ ಈತ ನಾಗೇಶ್. ಶ್ರೀರಾಂಪುರ ವೃತ್ತದ ಗ್ರಾಮ ಲೆಕ್ಕಿಗ. ಇದೀಗ ಈ ಮೂವರ ವಿರುದ್ಧ ಮೈಸೂರಿನ ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನೂ ಪ್ರಕರಣದ ಹಿನ್ನಲೆ ನೋಡಿದ್ರೆ, ಮೈಸೂರಿನ ನಂಜನಗೂಡು ಮುಖ್ಯ ರಸ್ತೆಯಲ್ಲಿ ಕಸಬಾ ಹೋಬಳಿ ವ್ಯಾಪ್ತಿಗೆ ಸೇರಿದ ಸರ್ವೆ ನಂ 155/2 ರಲ್ಲಿ 2 ಎಕರೆ 06 ಎಕರೆ ಜಾಗ ಇದೆ. ಇದು ತಿರುಮಲೈ ರೋಲರ್ ಪ್ಲೋರ್ ಮಿಲ್ ಪ್ರೈ ಲಿಗೆ ಸೇರಿದ ಜಾಗ. ಈ ಕಂಪನಿಗೆ ನರಸಿಂಹಣ್ಣ ಎಂಬುವವರು ನಿರ್ದೇಶಕರಾಗಿದ್ರು. 1999 ರಲ್ಲಿ ನರಸಿಂಹಣ್ಣ ನಿಧನರಾದ್ರು. ಈ ವೇಳೆ ಕಂಪನಿ ಕೂಡ ನಿಧನರಾದ ನರಸಿಂಹಣ್ಣಗೂ ಕಂಪನಿಗೂ ಯಾವುದೇ ಸಂಬಂಧ ಇಲ್ಲ ಎಂದು ಘೋಷಿಸಿತು. ಈ ವೇಳೆಯಲ್ಲಿ ಮುಡಾ ವತಿಯಿಂದ ಏಕವ್ಯಕ್ತಿ ಕೋರಿಕೆ ಮೇರೆಗೆ ಪ್ಲಾನ್ ಅಪ್ರೂವಲ್ ಮಾಡಿಸಲಾಗಿತ್ತು. ಆದ್ರೆ ನರಸಿಂಹಣ್ಣಗೂ ಈ ಜಾಗಕ್ಕೂ ಯಾವುದೇ ಹಕ್ಕು ಇಲ್ಲದಿದ್ದರೂ ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್, ಗ್ರಾಮ ಲೆಕ್ಕಿಗ ನಕಲಿ ದಾಖಲೆ ಸೃಷ್ಟಿಸಲು ಸಹಾಯ ಮಾಡಿ ಮೃತ ನರಸಿಂಹಣ್ಣ ಪತ್ನಿ ಲಕ್ಷ್ಮೀಬಾಯಿ, ಪುತ್ರಿಗೆ ಕಾನೂನು ಬಾಹಿರವಾಗಿ ಪೌತಿ ಖಾತೆ ಮಾಡಿಸಲು ಮುಂದಾಗಿ, ಕೋಟ್ಯಾಂತರ ರೂಪಾಯಿ ಆಸ್ತಿ ಭೂಗಳ್ಳರ ಪಾಲಾಗಲು ಸಾಥ್ ನೀಡಿದ್ದಾರೆ.
ಕಂಪನಿಯ ನಿರ್ದೇಶಕ ಬಿ. ಶ್ರೀಕಂಠ ಎಂಬುವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ದೂರು ದಾಖಲಾಗ್ತಿದ್ದಂತೆ ಈ ಮೂವರು ತಲೆಮರೆಸಿಕೊಂಡಿದ್ದಾರೆ. ಪ್ರಕರಣವನ್ನ ಪೊಲೀಸರು ಸರಿಯಾದ ಮಾರ್ಗದಲ್ಲಿ ತನಿಖೆ ಮಾಡಿದ್ರೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಗ್ರಾಮ ಲೆಕ್ಕಿಗ ಹಾಗೂ, ತಹಶೀಲ್ದಾರ್, ರೆವಿನ್ಯೂ ಇನ್ಸ್‌ಪೆಕ್ಟರ್ ಮತ್ತಷ್ಟು ಕೇಸ್ಗಳಲ್ಲಿ ಅಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ ಅನ್ನೋ ಗಂಭೀರವಾದ ಆರೋಪ ಕೂಡ ಈ ಮೂವರ ಮೇಲಿದೆ.
ಸುರೇಶ್ ಬಿ ಪವರ್ ಟಿವಿ ಮೈಸೂರು