Friday, November 22, 2024

ಓಲಾ, ಉಬರ್‌ ಹಗಲು ದರೋಡೆಗೆ ಬಿತ್ತು ಬ್ರೇಕ್‌..!

ಬೆಂಗಳೂರು : ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಓಲಾ, ಊಬರ್ ಹಾಗೂ ರ್ಯಾಪಿಡ್ ಕ್ಯಾಬ್ ಸೇವೆಗಳನ್ನು ನೀಡುತ್ತಿದೆ. ಯಾವಾಗ ಇವರು ಆಟೋಗಳನ್ನೂ ತಮ್ಮ ಜೊತೆ ಅಟ್ಯಾಚ್ ಮಾಡಿಕೊಂಡ್ರೋ, ಅಲ್ಲಿಂದಲೇ ಸಮಸ್ಯೆ ಶುರುವಾಗಿದ್ದು, ಕ್ಯಾಬ್ ಸೇವೆಗೆ ಅಂತ ನೋಂದಾಯಿಸಿ ಆಟೋ ಸೇವೆ ನೀಡೋದು ಅಕ್ರಮ ಅಂತ ಆಟೋ ಸಂಘಟನೆಗಳು ಹಲವಾರು ಬಾರಿ ಸಾರಿಗೆ ಇಲಾಖೆಗೆ ದೂರನ್ನೂ ನೀಡಿವೆ, ಕ್ರಮ ಜರುಗಿಸುವಂತೆ ಹೋರಾಟವೂ ಮಾಡಿವೆ. ಆದ್ರೆ, ಯಾವುದಕ್ಕೂ RTO ಮಾತ್ರ ತಲೆಕೆಡಿಸಿಕೊಂಡಿಲ್ಲ. ಇದನ್ನೇ ತನ್ನ ಅಸ್ತ್ರವಾಗಿಸಿಕೊಂಡಿದ್ದ ಓಲಾ, ಊಬರ್ ಆಟೋಗಳು ಕೇವಲ 1 ಕಿಲೋಮೀಟರ್ ಪ್ರಯಾಣಕ್ಕೆ ಕನಿಷ್ಟ 70 ರಿಂದ 100 ರೂಪಾಯಿ ವಸೂಲಿ ಮಾಡಲು ಆರಂಭಿಸಿದ್ರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಎಷ್ಟೇ ಪೋಸ್ಟ್ ಮಾಡಿದ್ರೂ ಸರ್ಕಾರದಿಂದ ಮಾತ್ರ ಯಾರೂ ಚಕಾರವೆತ್ತಲಿಲ್ಲ. ಸಾಮಾನ್ಯ ಆಟೋಗಳಿಗಾದ್ರೆ 30 ರೂಪಾಯಿ ಮಿನಿಮಂ, ಓಲಾ ಊಬರ್‌ಗಾದ್ರೆ 100 ಮಿನಿಮಂ ಅನ್ನೋದನ್ನು ಈ ಕಂಪನಿಗಳು ಅಳವಡಿಸಿಕೊಂಡಿದ್ದು, ಗ್ರಾಹಕರಿಂದ ಸುಲಿಗೆಗೆ ಇಳಿದಿವೆ.

ಇನ್ನು, ಈ ಓಲಾ ಹಾಗೂ ಉಬರ್ ಸುಲಿಗೆ ಬಗ್ಗೆ ಕಿಡಿ ಹೊತ್ತಿಕೊಳ್ತಿದ್ದಂತೆ ಸಾರಿಗೆ ಇಲಾಖೆ ಅಕ್ಟೋಬರ್ 6 ರಂದು ನೋಟಿಸ್ ಜಾರಿಗೊಳಿಸಿತ್ತು. ಕ್ಯಾಬ್ ಸೇವೆಗೆಂದು ಲೈಸೆನ್ಸ್ ಪಡೆದು ಆಟೋಗಳನ್ನು ಬಳಸುತ್ತಿರೋದು ಸೂಕ್ತವಲ್ಲ. ಈ ಕೂಡಲೇ ಆಟೋ ಸೇವೆಗಳನ್ನು ರದ್ದುಪಡಿಸಬೇಕು ಹಾಗೂ ಯಾವ ಆಧಾರದ ಮೇಲೆ ಆಟೋ ಸೇವೆ ಒದಗಿಸುತ್ತಿದ್ದೀರಾ ಎಂದು ಮಾಹಿತಿ ನೀಡಬೇಕು ಅಂತ ತಿಳಿಸಿತ್ತು. ಆದ್ರೆ, ನೊಟೀಸ್ ನೀಡಿ ಸಾರಿಗೆ ಇಲಾಖೆ ಕೈ ಚೆಲ್ತೋ ಗೊತ್ತಿಲ್ಲ. ಆದ್ರೆ ನೋಟೀಸ್ ನೀಡಿದ ಬಳಿಕನೂ ಸಂಚಾರ ನಡೆಸುತ್ತಿರುವ ಓಲಾ, ಉಬರ್ ವಿಚಾರಕ್ಕೆ. ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದು, ಓಲಾ ಉಬರ್ ಆಟೋವನ್ನು ಜಪ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಓಲಾ, ಉಬರ್ ಬಗ್ಗೆ ಹಲವರಿಂದ ದೂರುಗಳು ಬಂದಿತ್ತು.ತಾಂತ್ರಿಕ ಕಾರಣದಿಂದ ನೋಟೀಸ್ ನೀಡಲಾಗಿತ್ತು. ಪರವಾನಗಿ ಷರತ್ತು ಉಲ್ಲಘಿಸಿದ ಕಾರಣ ನೋಟೀಸ್ ನೀಡಲಾಗಿದೆ. ಅಂಥಹ ವಾಹನಗಳನ್ನು ಜಪ್ತಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡು ಮೂರು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ ಅಂತ ಸಚಿವ ಶ್ರೀರಾಮುಲು ಹೇಳ್ತಿದ್ದಾರೆ.

ಸದ್ಯ ನೋಟಿಸ್ ಕೊಟ್ರೇ ಏನು ಬೇಕಾದ್ರೂ ಆಗುತ್ತೆ ಅನ್ನೋ ಮಾತು ನಿನ್ನೆ ಮೊನ್ನೆಯದ್ದಲ್ಲ. ಓಲಾ ಉಬರ್ ಕೂಡ ಇದೇ ದಾರಿಯನ್ನು ಹಿಡಿದು ಹಿರಿಯ ಅಧಿಕಾರಿಗಳನ್ನು ಶಾಂತಗೊಳಿಸಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಒಟ್ನಲ್ಲಿ, ಹಗಲು ದರೋಡೆಯಾಗ್ತಿದೆ ಅನ್ನೋದು ಅಧಿಕಾರಿಗಳಿಗೆ ಗೊತ್ತಿದ್ರೂ ಅವರು ಮೀನಾಮೇಷ ಎಣಿಸುತ್ತಿರೋದು ನೋಡಿದ್ರೆ, ಇಲ್ಲಸಲ್ಲದ ಎಲ್ಲ ಅನುಮಾನಗಳು ಕಾಡುವಂತಾಗಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES