ಶಿವಮೊಗ್ಗ : ಹಿಂದೂ ಯುವಕರನ್ನು ನಾನು ಗೂಂಡಾಗಳೆಂದು ಕರೆಯುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮತಾಂಧ ಶಕ್ತಿಗಳು ವಿಜೃಂಭಿಸುತ್ತಿವೆ. ಎಲ್ಲಿ ನೋಡಿದರೂ ಧಾರ್ಮಿಕ ತಲ್ಲಣಗಳು ನಡೆಯುತ್ತಲೇ ಇವೆ. ಧರ್ಮಗಳ ನಡುವೆ ಕೆಲವು ಮುಸ್ಲಿಂ ಗೂಂಡಾಗಳು, ಹಿಂದೂ ಯುವಕರನ್ನು ಹತ್ಯೆ ಮಾಡುತ್ತಿದ್ದಾರೆ. ಅತ್ಯಾಚಾರದಲ್ಲಿ ತೊಡಗಿದ್ದಾರೆ. ಇಂತಹ ಗೂಂಡಾಗಳಿಗೆ ಭಾರತ ಸರ್ಕಾರ ದಿಟ್ಟ ಉತ್ತರ ಕೊಡುತ್ತಿದೆ. ಹಾಗಂತ ಎಲ್ಲಾ ಮುಸ್ಲಿಂರು ಗೂಂಡಾಗಳಲ್ಲಾ. ರಾಷ್ಟ್ರಭಕ್ತ ಮುಸ್ಲಿಮರು ಕೂಡ ಈ ದೇಶದಲ್ಲಿ ಇದ್ದಾರೆ ಎಂದು ಅವರು ಹೇಳಿದ್ದಾರೆ.
ಅಲ್ಲದೇ, ಧರ್ಮದ ಕಾರಣಕ್ಕಾಗಿ ಹಿಂದೂ ಯುವಕರು ಕೊಲೆ ಮಾಡಿದ ಉದಾಹರಣೆಗಳು ಇಲ್ಲ. ಹಿಂದೂ ಯುವಕರನ್ನು ನಿರಂತರವಾಗಿ ಹತ್ಯೆಗೈಯಲಾಗುತ್ತಿದೆ. ಇಂತಹ ಗೂಂಡಾಗಳನ್ನು ಏನೆಂದು ಕರೆಯಬೇಕು ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಇದೇವೇಳೆ ಮತ್ತೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದಿಯಾ ಎಂಬ ವಿಚಾರಕ್ಕೆ, ನನ್ನ ಮೇಲೆ ಆರೋಪ ಬಂದಾಗ ರಾಜೀನಾಮೆ ನೀಡಿದ್ದೆ. ಈ ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಗೃಹ ಸಚಿವ ಜಾರ್ಜ್ ಅವರನ್ನು ಕೂಡ ರಾಜೀನಾಮೆಗೆ ಒತ್ತಾಯಿಸಿದ್ದೆ. ಅವರು ರಾಜೀನಾಮೆ ನೀಡಿದ್ದರು, ನಿರ್ದೋಷಿಯಾದ ಬಳಿಕ ಮತ್ತೆ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗೆಯೇ ನಾನು ಕೂಡ ನಿರ್ದೋಷಿಯಾಗಿರುವೆ. ಸಚಿವ ಸ್ಥಾನಕ್ಕೆ ಬಯಸಿರುವುದು ನಿಜ. ಆದರೆ, ವರಿಷ್ಠರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಈಶ್ವರಪ್ಪ ಹೇಳಿದ್ದಾರೆ.