ಬೆಳಗಾವಿ : ತಾಲೂಕಿನ ಸುಳೇಭಾವಿ ಅಂದ್ರೆ ಅದು ಸುಕ್ಷೇತ್ರ. ಗ್ರಾಮದೇವತೆ ಲಕ್ಷ್ಮೀದೇವಿ ಇರುವ ಶಕ್ತಿದೇವಿಯ ನೆಲ... ಇಂತಹ ಶಕ್ತಿ ದೇವಿ ನೆಲದಲ್ಲಿ ನೆತ್ತರು ಹರಿದಿತ್ತು. ಗ್ಯಾಂಗ್ ಕಟ್ಟಿಕೊಂಡು ಓಡಾಡುತ್ತಿದ್ದ ಇಬ್ಬರು ಪುಡಿರೌಡಿಗಳು ಬರ್ಬರವಾಗಿ ಹತ್ಯೆಗೀಡಾಗಿದ್ದರು.
ಇನ್ನು, 26 ವರ್ಷದ ಮಹೇಶ್ ಮುರಾರಿ ಅಲಿಯಾಸ್ ರಣಧೀರ ಹಾಗೂ 24 ವರ್ಷದ ಪ್ರಕಾಶ್ ಹುಂಕರಿ ಪಾಟೀಲ್ ಅಲಿಯಾಸ್ ಡಾಲಿ ಪ್ರಕಾಶ್‌ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ(24) ಅಲಿಯಾಸ್ ಸಸ್ಸಾ, ಯಲ್ಲೇಶ್ ಹುಂಕ್ರಿ ಪಾಟೀಲ್(22) ಅಲಿಯಾಸ್ ಎಲ್‌ಜಿ ಭಾಯ್, ಮಂಜುನಾಥ ಶಿವಾಜಿ ಪರೋಜಿ(22), ದೇವಪ್ಪ ರವಿ ಕುಕಡೊಳ್ಳಿ(26) ಪಕ್ಕದ ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ ಹಣಬರಟ್ಟಿ(20), ಭರಮಣ್ಣ ನಾಗಪ್ಪ ನಾಯಕ(20) ಬಂಧಿತರು. ಕೊಲೆಯಾದ ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಹಾಗೂ ಬಂಧಿತರೆಲ್ಲರೂ ಮೊದಲು ಒಂದೇ ಗ್ಯಾಂಗ್‌ನಲ್ಲಿದ್ದಂತವರು. ಗ್ರಾಮದಲ್ಲಿ ತಮ್ಮದೇ ಆದ ಗ್ಯಾಂಗ್ ಕಟ್ಟಿಕೊಂಡ ಇವರ ಮಧ್ಯೆ ಐದು ತಿಂಗಳ ಹಿಂದೆ ವೈಷಮ್ಯ ಬೆಳೆದಿತ್ತು.
ಇನ್ನು ಕೊಲೆಯಾದ ಮಹೇಶ್ ಮುರಾರಿ ಹಾಗೂ ಪ್ರಕಾಶ್ ಪಾಟೀಲ್ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ರೀಲ್ಸ್ ಮಾಡಿದ್ದು ಜಾಲತಾಣಗಳಲ್ಲಿ ವೈರಲ್ ಆಗಿವೆ. ರೌಡಿಸಂ ಹಿನ್ನೆಲೆಯ ಚಲನಚಿತ್ರಗಳಿಂದ ಪ್ರಭಾವಿತರಾಗಿ ಇನ್‌ಸ್ಟಾಗ್ರಾಂನಲ್ಲಿ, ಫೇಸ್‌ಬುಕ್‌ನಲ್ಲಿ ಚಲನಚಿತ್ರಗಳ ಡೈಲಾಗ್‌ಗಳಿಗೆ ಕೈಯಲ್ಲಿ ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡುತ್ತಿದ್ರು.ಇಷ್ಟಾದ್ರೂ ಮೇಲಾಧಿಕಾರಿಗಳ ಗಮನಕ್ಕೆ ತಾರದ ಮಾರಿಹಾಳ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಬಿ.ಎಸ್.ಬಳಗಣ್ಣವರ್, ಕಾನ್ಸ್‌ಟೇಬಲ್ ಆರ್.ಎಸ್.ತಳೇವಾಡೆಯನ್ನು ಅಮಾನತು ಮಾಡಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಕೊಲೆಯಾದ ಪ್ರಕಾಶ್ ಪಾಟೀಲ್ ಹೆಂಡತಿ 9 ತಿಂಗಳ ತುಂಬು ಗರ್ಭಿಣಿಯಾಗಿದ್ದಾಳೆ. ರೌಡಿಸಂನಲ್ಲಿ ಹೆಸರು ಮಾಡಬೇಕು. ನಾವೇ ಡಾನ್ ಆಗಿ ಮೆರೆಯಬೇಕು ಎಂಬ ಧಾವಂತದಲ್ಲಿದ್ದ ಇಬ್ಬರು ಯುವಕರು ಬೀದಿ ಹೆಣವಾಗಿದ್ದು ವಿಪರ್ಯಾಸ.
ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ