Monday, December 23, 2024

ರಾಜ್ಯಾದ್ಯಂತ ಓಲಾ, ಉಬರ್ ಆಟೋ ರಿಕ್ಷಾ ಸೇವೆ ಬಂದ್..!

ಬೆಂಗಳೂರು : ನಿತ್ಯ ಸುಖಕರ ಪ್ರಯಾಣ ನೀಡುತ್ತಿದ್ದ ಓಲಾ ಉಬರ್ ಆಟೋರಿಕ್ಷಾ ಸಂಚಾರಕ್ಕೆ ಸಾರಿಗೆ ಇಲಾಖೆ ಕೊಕ್ಕೆ ಹಾಕಿದೆ. ಅಗ್ರಿಗೇಟರ್ ಅಧಿನಿಯಮ -2016 ರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಓಲಾ ಉಬರ್ ಕಂಪನಿಗಳಿಗೆ ಸಾರಿಗೆ ಇಲಾಖೆ ನೋಟಿಸ್ ಕೊಟ್ಟಿದೆ.ಸಾರಿಗೆ ಇಲಾಖೆ ನಿಯಮದ ಪ್ರಕಾರ ಮಿನಿಮಮ್ ಜಾರ್ಜ್ ಆಟೋ ದರ ಮೊದಲ 2 ಕಿಲೋ ಮೀಟರ್‌ಗೆ 30 ರೂ. ಇದ್ದು, ನಂತರದ ಪ್ರತಿ ಕಿಲೋಮೀಟರ್‌ಗೆ 15 ರೂ. ಇದೆ. ಆದರೆ, ಅಗ್ರಿಗೇಟರ್‌ಗಳು ಇದಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆ.ಕಂಪನಿಗಳು ತಮ್ಮ ಆಟೋ ಸೇವೆಗಳನ್ನು ಕೂಡಲೇ ನಿಲ್ಲಿಸುವ ಜೊತೆಗೆ ಟ್ಯಾಕ್ಸಿಗಳಲ್ಲಿಯೂ ಪ್ರಯಾಣಿಕರಿಗೆ ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಬಾರದು ಎಂದು ಸಾರಿಗೆ ಇಲಾಖೆ ಸೂಚನೆ ನೀಡಿದೆ. ಆದೇಶ ಪಾಲಿಸಲು ವಿಫಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಸಿದೆ.

ಇನ್ನೂ ನಿಬಂಧನೆಗಳ ಪ್ರಕಾರ ಓಲಾ ಉಬರ್ ಕಂಪನಿಗಳಿಗೆ ಟ್ಯಾಕ್ಸಿ ಸೇವೆ ಒದಗಿಸಲು ಮಾತ್ರ ಲೈಸೆನ್ಸ್‌ನಲ್ಲಿ ಅವಕಾಶ ನೀಡಲಾಗಿದೆ.’ಕರ್ನಾಟಕ ಆನ್-ಡಿಮಾಂಡ್ ಟ್ರಾನ್ಸ್‌ಪೋರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್ – 2016’ರ ಅಡಿಯಲ್ಲಿ ಟ್ಯಾಕ್ಸಿ ಸೇವೆ ನೀಡಲು ಮಾತ್ರ ಪರವಾನಗಿಯನ್ನು ನೀಡಲಾಗಿದೆ. ಆದ್ರೆ, ಅಗ್ರಿಗೇಟರ್‌ಗಳು ನಿಯಮಾವಳಿಗಳನ್ನು ಉಲ್ಲಂಘಿಸಿ ಆಟೋರಿಕ್ಷಾ ಸೇವೆಗಳನ್ನು ಒದಗಿಸುತ್ತಿದ್ದಾರೆ. ಅಲ್ಲದೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರವನ್ನು ಗ್ರಾಹಕರಿಂದ ವಸೂಲಿ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.ಹೀಗಾಗಿ ಈ ನೋಟಿಸ್‌ ನೀಡಲಾಗಿದೆ ಅಂತ ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ.ಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ 40 ಸಾವಿರಕ್ಕೂ ಹೆಚ್ಚು ಓಲಾ ಉಬರ್ ಆಟೋ ರಿಕ್ಷಾಗಳು ಸಂಚಾರ ಮಾಡುತ್ತಿವೆ. ಆದರೆ, ನಿಯಮದ ಪ್ರಕಾರ ಟ್ಯಾಕ್ಸಿ ಸೇವೆ ಜೊತೆಗೆ ಆಟೋ ರಿಕ್ಷಾ ಸೇವೆ ನೀಡೋದ್ರ ಜೊತೆಗೆ ದುಪ್ಪಟ್ಟು ದರ ವಸೂಲಿ ಮಾಡುತ್ತಿರೋ ಅರೋಪ ಕೇಳಿಬಂದಿದೆ. ಇದಲ್ಲದೆ ಪದೇ ಪದೇ ಹಲವು ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಓಲಾ ಉಬರ್ ಕಂಪನಿಗಳ ಮೇಲಿನ ಶಿಸ್ತು ಕ್ರಮಕ್ಕೆ ಇಲಾಖೆ ಮುಂದಾಗಿರೋದನ್ನು ಓಲಾ ಉಬರ್ ಟ್ಯಾಕ್ಸಿ ನೌಕರರ ಅಸೋಸಿಯೇಷನ್ ಸ್ವಾಗತ ಮಾಡಿದೆ.

ಒಟ್ಟಿನಲ್ಲಿ ನಿಯಮ ಉಲ್ಲಂಘಿಸಿದ್ದಕ್ಕೆ ಓಲಾ ಉಬರ್ ಕಂಪನಿಯ ಮೇಲೆ ಸಾರಿಗೆ ಇಲಾಖೆ ಸಮರ ಸಾರಿದೆ. ಇದರಿಂದ ಆ್ಯಫ್ ಆಧಾರಿತ ಆಟೋ ರಿಕ್ಷಾ ಸೇವೆ ನಂಬಿಕೊಂಡು ಓಡಾಡುವ ಮಂದಿ ಅನಿವಾರ್ಯವಾಗಿ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಬೇಕಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES