Sunday, May 19, 2024

ಕೇಂದ್ರ ಸರ್ಕಾರದಿಂದ ಎರಡನೇ ವರ್ಷಕ್ಕೆ ಕುಚ್ಚಲಕ್ಕಿ ಪ್ರಭೇದಗಳ ವಿತರಣೆಗೆ ಅನುಮತಿ

ನವದೆಹಲಿ :  ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಸ್ಥಳೀಯ ಕುಚ್ಚಲಕ್ಕಿ ಪಡಿತರ ವ್ಯವಸ್ಥೆಯಡಿಯಲ್ಲಿ ವಿತರಿಸಲು ಸತತ ಎರಡನೇ ವರ್ಷಕ್ಕೆ ಕೇಂದ್ರ ಸರಕಾರದ ಅನುಮೋದನೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿರುವ, ಸ್ಥಳೀಯ ಕುಚ್ಚಲಕ್ಕಿ ಪ್ರಭೇಧಗಳಾದ M04, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿಯಲ್ಲಿ (MSP) ಖರೀದಿ ಮಾಡಿ ಪಡಿತರದ ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲಾ ವ್ಯಾಪ್ತಿಗಳಲ್ಲಿ ವಿತರಿಸಲು ಕೇಂದ್ರ ಸರಕಾರ ಇದೀಗ ಏರಡನೇ ವರ್ಷಕ್ಕೂ ಅನುಮೋದನೆ ನೀಡಿದೆ.

ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ ನಾಗರಿಕರು ಪಡಿತರದ ಮೂಲಕ ಕುಚ್ಚಲ್ಲಕ್ಕಿಯನ್ನು ವಿತರಿಸುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಬೇಡಿಕೆಯನ್ನು ಸಲ್ಲಿಸಿದ್ದರು. ಈ ನಿಟ್ಟಿನಲ್ಲಿ ಉಡುಪಿ- ಚಿಕ್ಕಮಗಳೂರು ಸಂಸದೆ ಹಾಗೂ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆಯವರು ಮತ್ತು ರಾಜ್ಯ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಯತ್ನದಿಂದ ಕರ್ನಾಟಕ ಸರ್ಕಾರ ಸದರಿ ಬೇಡಿಕೆಯನ್ನು ಅನುಮೋದಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ, ಶೋಭಾ ಕರಂದ್ಲಾಜೆಯವರು, ಕೇಂದ್ರದ ಸದರಿ ಇಲಾಖಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಸದರಿ ಪ್ರಸ್ತಾವನೆಯನ್ನು ಅನುಮೋದಿಸುವಂತೆ ಕೋರಿದ್ದರು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರ ಮನವಿಯನ್ನು ಪರಿಗಣಿಸಿದ ಸನ್ಮಾನ್ಯ ಶ್ರೀ ಪಿಯೂಷ್ ಗೋಯಲ್ ಅವರು ಮೇಲ್ಕಾಣಿಸಿದ ಕುಚ್ಚಲಕ್ಕಿ ಪ್ರಭೇಧಗಳನ್ನು ಬೆಳೆಯುವ ರಾಜ್ಯದ ಜಿಲ್ಲೆಗಳಿಂದ MSP ಮೂಲಕ ಖರೀದಿ ಮಾಡಿ ಪಡಿತರದ ಮೂಲಕ ವಿತರಿಸಲು ರಾಜ್ಯ ಸರಕಾರಕ್ಕೆ ಅನುಮತಿ ನೀಡಿರುತ್ತಾರೆ. ಕೇಂದ್ರದ ಈ ಅನುಮತಿಯೊಂದಿಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ರೈತರ ಕೃಷಿ ಉತ್ಪಾದನೆಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಸಿಕ್ಕಿದಂತಾಗಿದೆ. ಅದಲ್ಲದೇ, ಕುಚ್ಚಲಕ್ಕಿಯನ್ನೇ ಹೆಚ್ಚಾಗಿ ಸೇವಿಸುವ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಾರ್ವಜನಿಕರ ಬೇಡಿಕೆಯಾದ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸುವ ಬೇಡಿಕೆಗೆ ಪುಷ್ಟಿ ಸಿಕ್ಕಿದೆ.

ಸ್ಥಳೀಯ ರೈತರ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಕೇಂದ್ರ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರಿಗೆ ಹಾಗೂ ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಸತತ ಪ್ರಯತ್ನ ನಡೆಸಿದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಕೆಂದ್ರ ಕೃಷಿ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆಯವರು ಧನ್ಯವಾದಗಳನ್ನು ತಿಳಿಸಿರುತ್ತಾರೆ ಹಾಗೂ ಇದರ ಪ್ರಯೋಜನವನ್ನು ಕ್ಷೇತ್ರದ ಜನತೆ ಪಡೆಯುವಂತೆ ಕೋರಿರುತ್ತಾರೆ.

RELATED ARTICLES

Related Articles

TRENDING ARTICLES