ಬೆಂಗಳೂರು: ಕನ್ನಡ ಸಿನಿಮಾಗಳಿಗೆ ವಿಶಿಷ್ಠ ಆಯಾಮ ಕೊಟ್ಟ ನಿರ್ದೇಶಕ ಅಂದ್ರೆ ಅದು ವಿಕಟಕವಿ ಯೋಗರಾಜ್ ಭಟ್. ಇವ್ರ ಕೈ ರುಚಿಯ ಸಿನಿಮಾಗಳಿಗೆ ಉಪವಾಸವಿದ್ದು ಕಾಯ್ತಾರೆ ಸಿನಿರಸಿಕರು. ಸೂಪರ್ ಹಿಟ್ ಸಿನಿಮಾ ಕೊಟ್ಟ ಮೋಸ್ಟ್ ಕ್ರಿಯೇಟಿವ್ ಹೆಡ್ ಯೋಗರಾಜ್ ಭಟ್, 11 ವರ್ಷಗಳ ಹಿಂದೆಯೇ ಕನ್ನಡ ಎಂಬ ‘ಪರಮಾತ್ಮ’ನ ಸಿನಿ ಅಭಿಮಾನಿಗಳಿಗೆ ದರ್ಶನ ಮಾಡಿಸಿದ್ರು. ಇದೀಗ ಆ ನೆನಪು ಭಟ್ರ ಜೀವ ಹಿಂಡುತ್ತಿದೆ. ಕಾಡಿದ ನೆನಪನ್ನು ಭಟ್ರು ತಮ್ಮದೇ ಪರಿಯಲ್ಲಿ ಹಂಚಿಕೊಂಡಿದ್ದಾರೆ.
ಸಕಲ ಜೀವರಾಶಿಗಳ ಸೃಷ್ಠಿಕರ್ತ ಪರಮಾತ್ಮ. ಆತನ ದರ್ಶನ ಅಷ್ಟು ಸುಲಭವಾಗಿ ಎಲ್ರಿಗೂ ಸಿಗೋದಿಲ್ಲ. ಅದನ್ನು ಗುರುತಿಸುವ ಒಳಗಣ್ಣು ಇರಬೇಕು. ಭಟ್ರಿಗೆ 11 ವರ್ಷಗಳ ಹಿಂದೆಯೇ ಪರಮಾತ್ಮನ ದರ್ಶನವಾಗಿತ್ತು. ಇಂದು ಇಡೀ ಮನಕುಲವೇ ಅಪ್ಪು ಎಂಬ ಅನನ್ಯ ಚೇತನವನ್ನು ದೇವರ ರೂಪದಲ್ಲಿ ಕಾಣ್ತಿದ್ದೇವೆ. ಪ್ರತಿನಿತ್ಯ ಪೂಜೆ ಸಲ್ಲಿಸ್ತಿದ್ದೇವೆ. ಆದ್ರೆ, ಪುನೀತ್ ಒಳಗೊಬ್ಬ ಪರಮಾತ್ಮ ಇರೋದನ್ನು ಭಟ್ರು ಆಗಲೇ ಗುರುತಿಸಿದ್ದರು.
ಯೋಗರಾಜ್ ಭಟ್ ಸಿನಿಕರಿಯರ್ನ ಹಿಟ್ ಸಿನಿಮಾಗಳಲ್ಲಿ ಪರಮಾತ್ಮ ಕೂಡ ಒಂದು. ಈ ಚಿತ್ರದಲ್ಲಿ ಅಪ್ಪು, ಪರಮ್ ರೋಲ್ನಲ್ಲಿ ಕಾಣಿಸಿಕೊಂಡಿದ್ರು. ಮುಖದ ಮೇಲೆ ಮಾಸದ ರಾಶಿ ರಾಶಿ ನಗು, ತುಂಟತನದ ಮಾತುಗಳು, ಮಗುವಿನ ತಲೆಹರಟೆ, ಕೃಷ್ಣನ ಕುಚೇಷ್ಠೆ, ಬದುಕನ್ನು ಪ್ರೀತಿಸುವ ಬಗೆ, ಸಿಕ್ಕಾಪಟ್ಟೆ ರೊಮ್ಯಾನ್ಸ್, ಹೀಗೆ ಇವೆಲ್ಲವೂ ಪರಮ್ ಪಾತ್ರದಲ್ಲಿತ್ತು. ಕಥೆ ಅಪ್ಪು ಅವರನ್ನು ಡಿಮ್ಯಾಂಡ್ ಮಾಡಿದ್ದಲ್ಲ. ಅಪ್ಪುಗಾಗಿಯೇ ಕಥೆ ಬರೆದಂತಿತ್ತು.
ಇಂದಿಗೆ ಪರಮಾತ್ಮ ಸಿನಿಮಾ 11 ವರ್ಷಗಳನ್ನು ಪೂರೈಸಿದೆ. ಈ ನೆನಪು ಬಿಟ್ಟೂ ಬಿಡದಂತೆ ಭಟ್ರ ಜೀವ ಹಿಂಡ್ತಿದೆ. ಹಾಗಾಗಿ ಆ ನೆನಪನ್ನು ಭಟ್ರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಪ್ಪು ಹಳೆಯ ಆಡಿಯೋ ತುಣಕು, ಅಂದ್ರೆ 9 ವರ್ಷ ತುಂಬಿದಾಗ ಮಾತನಾಡಿರೋದು ಇದರಲ್ಲಿದ್ದು, ಕಣ್ಣೀರು ಉಮ್ಮಳಿಸಿ ಬರುವಂತಿದೆ. ಸರ್ ವಂಡರ್ಫುಲ್ ಎಕ್ಸ್ಪೀರಿಯನ್ಸ್. ಮತ್ತೆ ಒಂದೊಳ್ಳೆ ಸಿನಿಮಾ ಮಾಡೋಣ ಅಂತಾ ಅಪ್ಪು ಭಟ್ರಿಗೆ ವಾಯ್ಸ್ ನೋಟ್ ಕಳಿಸಿದ್ದಾರೆ. ಈ ಹಳೆ ಆಡಿಯೋ ಅಭಿಮಾನಿಗಳ ಮನಕಲಕುವಂತಿದೆ.
ಉಸಿರು ಪೂರ್ತಿ ಹೋದರೂ, ಹೆಸರು ಪೂರ್ತಿ ನೆನಪಿದೆ ಅನ್ನೋ ಆರಂಭದ ಸಾಲುಗಳು ಕಣ್ಣಂಚಲ್ಲಿ ಕಂಬನಿ ತರಿಸುತ್ತವೆ. ಅಪ್ಪು ಸರ್ ನೆನಪಿನೊಂದಿಗೆ ಈ ಹಾಡಿನ ಸಾಲುಗಳು ಸಖತ್ ಎಮೋಷನಲ್ ಅನಿಸಿವೆ. ನೀನು ಇರದೆ ಹೋದರೂ, ನಿನ್ನ ನಗೆಯ ಬೆಳಕಿದೆ ಅನ್ನೋ ಗೀತೆ ಪರಮಾತ್ಮ ಸಿನಿಮಾವನ್ನು ಮತ್ತೆ ಮತ್ತೆ ನೆನಪಿಸುತ್ತದೆ. ಅಪ್ಪು, ಭಟ್ರ ಕಾಂಬೋದಲ್ಲಿ ಮೂಡಿಬಂದ ಅದ್ಭುತ ಸಿನಿಮಾ ಇದು. ಜೊತೆಗಿರದ ಜೀವ ಸದಾ ಜೀವಂತ.
ರಾಕೇಶ್ ಅರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ