ಮಂಗಳೂರು : ಪರೇಶ್ ಮೆಸ್ತಾ ಪ್ರಕರಣದಲ್ಲಿ ಸಿ ಬಿ ಐ ತನಿಖೆಯ ಬಳಿಕ ಬಿ ರಿಪೊರ್ಟ್ ಸಲ್ಲಿಕೆ ವಿಚಾರಕ್ಕೆ ಮಾಜಿ ಸಚಿವ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ ಮಾಡುತ್ತದೆ ಎಂಬುದು ಸಾಭೀತಾಗಿದೆ. ಬಡ ಕುಟುಂಬದ ಮನೆಯ ಸಂಕಷ್ಟವನ್ನು ಬೀದಿಗೆ ತಂದು ರಾಜಕೀಯ ಮಾಡುವುದು ಬಿಜೆಪಿ ಚಿಂತನೆ. ಈಗ ಸಂಸದ ಅನಂತ್ ಕುಮಾರ್ ಹೆಗ್ಡೆ ಎಲ್ಲಿ ಹೋಗಿದ್ದಾರೆ. ಸಾವನ್ನು ರಾಜಕೀಯವಾಗಿ ಬಳಸುವುದು ಬಿಜೆಪಿಯ ಚುನಾವಣಾ ತಂತ್ರ. ಪರೇಶ್ ಮೆಸ್ತಾ ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದು ಕಾಂಗ್ರೆಸ್ ಸರಕಾರ. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಇಲ್ಲ ಸಲ್ಲದ ಅರೋಪ ಮಾಡಿದ್ದರು. ಜನರನ್ನು ರೊಚ್ಚಿಗೆಬ್ಬಿಸಿ ಪೊಲೀಸ್ ವಾಹನಗಳಿಗೆ ಬೆಂಕಿ ಇಡುವಂತೆ ಪ್ರೇರೆಪಿಸಿದ್ದರು.
ಮೆಸ್ತಾ ಸಾವಿನ ಬಳಿಕ ಬಿಜೆಪಿ ಮುಖಂಡರು ಮೆಸ್ತಾ ಅವರ ಮನೆಯನ್ನು ಪ್ರವಾಸಿ ತಾಣ ವಾಗಿಸಿದರು. ಇಲ್ಲ ಸಲ್ಲದ ಆರೋಪ, ಹೇಳಿಕೆ ನೀಡಿ ಅಧಿಕಾರಕ್ಕೆ ಬಂದ ಬಳಿಕ ಪರೇಶ್ ಮೆಸ್ತಾ, ಅವರ ಬಡ ಕುಟುಂಬವನ್ನು ಬಿಜೆಪಿ ನಾಯಕರು ಮರೆತರು. ರಾಜಕೀಯ ಸಂದರ್ಭದಲ್ಲಿ ಬಳಸಿ ನಂತರ ಮರೆಯುವುದು ಬಿಜೆಪಿ ಮುಖಂಡರದ್ದು ಹಳೆ ಚಾಳಿ. ಅಧಿಕಾರಕ್ಕೆ ಬಂದ ಬಳಿಕ ಒಬ್ಬ ಶಾಸಕನಾಗಲಿ, ಸಚಿವ ನಾಗಲಿ ,ಸಂಸದರಾಗಲಿ ಮೆಸ್ತಾ ಮನೆಗೆ ಭೇಟಿ ನೀಡಿಲ್ಲ. ಸಂಕಷ್ಟದಲ್ಲಿದ್ದ ಮೆಸ್ತಾ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿಲ್ಲ. ಜನರು ಬಿಜೆಪಿ ನಾಯಕರ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಚುನಾವಣಾ ಸಂದರ್ಭದಲ್ಲಿ ಜನರು ಜಾಗೃತರಾಗಬೇಕು.