Wednesday, January 22, 2025

300 ಕೋಟಿ ಕ್ಲಬ್​ನತ್ತ ಮಣಿರತ್ನಂ ಪೊನ್ನಿಯಿನ್ ಸೆಲ್ವನ್ ಓಟ

ರಾಜಮೌಳಿ, ಬನ್ಸಾಲಿ ಸಾಲಿಗೆ ಮಣಿರತ್ನಂ ಕೂಡ ಸೇರ್ಪಡೆ ಆಗೋ ಮೂಲಕ ಐತಿಹಾಸಿಕ ಸಿನಿಮಾಗಳನ್ನ ಮಾಡೋ ಮಾಸ್ಟರ್​ಮೈಂಡ್ ಆಗಿ ಕಮಾಲ್ ಮಾಡ್ತಿದ್ದಾರೆ. ಪೊನ್ನಿಯಿನ್ ಸೆಲ್ವನ್ ದೃಶ್ಯ ವೈಭವಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಬಹುತಾರಾಗಣದ ಹಾಗೂ ಬಿಗ್ ಬಜೆಟ್ ಸಿನಿಮಾದ ಸ್ಕೇಲ್​ಗೆ ತಕ್ಕನಾಗಿ ಬಾಕ್ಸ್ ಆಫೀಸ್ ಪೈಸಾ ವೈಸೂಲ್ ಕೂಡ ಆಗ್ತಿದೆ.

  • ಬಿಬಿಸಿಯಲ್ಲಿ PS​-1 ದೃಶ್ಯವೈಭವಕ್ಕೆ ಮೆಚ್ಚುಗೆಯ ಮಹಾಪೂರ
  • 3 ದಿನಕ್ಕೆ 200 ಕೋಟಿ ಕ್ಲಬ್.. ಇದು ಸೌತ್ ಮೇಕರ್ಸ್​ ಗಮ್ಮತ್ತು
  • ರಾಜಮೌಳಿಯಂತೆ ಮತ್ತೊಬ್ಬ ಮಾಸ್ಟರ್​ಮೈಂಡ್ ಸಂಚಲನ

ಬರೋಬ್ಬರಿ ಒಂದು ಸಾವಿರ ವರ್ಷಗಳ ಹಿಂದೆ, ಚೋಳರ ಸುವರ್ಣಯುಗ ಆರಂಭವಾಗೋಕೂ ಮುನ್ನ, ಆಕಾಶದಲ್ಲೊಂದು ಧೂಮಕೇತು ಕಾಣಿಸಿಕೊಂಡಿತ್ತು. ಆ ಧೂಮಕೇತು ಚೋಳ ರಾಜರ ರಕ್ತವನ್ನು ಬಲಿ ತೆಗೆದುಕೊಳ್ಳುತ್ತೆ ಅಂತ ಜ್ಯೋತಿಷಿಗಳು ಭವಿಷ್ಯ ನುಡಿದ್ರು. ರಾಜ್ಯವನ್ನು ಮುತ್ತಿಗೆ ಹಾಕಿತ್ತು ದ್ವೇಷ. ಸಮುದ್ರಗಳು ಉಕ್ಕೇರಿದವು. ಅರಮನೆಗೆ ನುಗ್ಗಿತು ವಂಚನೆ. ಆಗ ಶುರುವಾಗಿದ್ದೇ ಈ ಪೊನ್ನಿಯಿನ್ ಸೆಲ್ವನ್ ಮಹಾ ಕದನ.

ಯೆಸ್.. ಇದು ಬೆಳ್ಳಿ ಪರದೆ ಬೆಳಗುತ್ತಿರೋ ಚೋಳ ಸಾಮ್ರಾಜ್ಯದ ಗತವೈಭವದ ಮಹಾ ದೃಶ್ಯಕಾವ್ಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಟ್ರೈಲರ್ ಝಲಕ್. ಬರೋಬ್ಬರಿ 500 ಕೋಟಿ ಬೃಹತ್ ವೆಚ್ಚದಲ್ಲಿ ತಯಾರಾದ ಈ ಚಿತ್ರ, ಭಾರತೀಯ ಚಿತ್ರರಂಗದಲ್ಲಿ ರಾಜಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಸಿನಿಮಾಗಳಂತೆ ಬಹುದೊಡ್ಡ ಇಂಪ್ಯಾಕ್ಟ್ ಕ್ರಿಯೇಟ್ ಮಾಡ್ತಿದೆ.

ಪದ್ಮಶ್ರೀ ಪುರಸ್ಕೃತ, ಆರು ಬಾರಿ ನ್ಯಾಷನಲ್ ಅವಾರ್ಡ್ಸ್ ಪಡೆದಂತಹ ಮೇರು ನಿರ್ದೇಶಕ ಮಣಿರತ್ನಂ ಅವ್ರು ಈ ಮಹಾದೃಶ್ಯಕಾವ್ಯವನ್ನು ತೆರೆಗೆ ತಂದಿದ್ದು, ಒಂದೊಂದು ಫ್ರೇಮ್ ಕೂಡ ವ್ಹಾವ್ ಫೀಲ್ ಕೊಡ್ತಿದೆ. ಆದಿತ್ಯ ಕರಿಕಾಲನಾಗಿ ಚಿಯಾನ್ ವಿಕ್ರಮ್, ಅವ್ರ ಆಪ್ತಮಿತ್ರ ವಲ್ಲಭರಾಯನ್ ವಂಡಿಯಾದೇವನಾಗಿ ಕಾರ್ತಿ, ಅರುಣ್​ಮೋಲಿ ವರ್ಮಾ ಪಾತ್ರದಲ್ಲಿ ಜಯಂ ರವಿ ಹಾಗೂ ಆತನ ಸಹೋದರಿ ಕುಂದವೈ ರೋಲ್​ನಲ್ಲಿ ತ್ರಿಶಾ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.

ತಂಜಾವೂರಿನ ಯುವರಾಣಿ ನಂದಿನಿಯಾಗಿ ಐಶ್ವರ್ಯಾ ರೈ ಬಚ್ಚನ್ ಖದರ್ ಜೋರಿದ್ದು, ಅರುಣ್​ಮೋಲಿ- ಕರಿಕಾಲ ಒಂದಾಗದಂತೆ ನೋಡಿಕೊಳ್ಳೋ ಪರಿ ಇಂಟರೆಸ್ಟಿಂಗ್. ಇದಲ್ಲದೆ ಸಾಕಷ್ಟು ಹಿರಿಯ ಹಾಗೂ ಕಿರಿಯ ಕಲಾವಿದರ ಮಹಾಸಮ್ಮಿಲನ ಈ ಸಿನಿಮಾದ ಮೂಲಕ ಆಗಿದೆ. ನಮ್ಮ ಕನ್ನಡಿಗರಾದ ಪ್ರಕಾಶ್ ರೈ, ಕಿಶೋರ್, ಐಶ್ವರ್ಯಾ ರೈ ಕೂಡ ಚಿತ್ರದ ಭಾಗವಾಗಿರೋದು ಖುಷಿಯ ವಿಚಾರ.

ಸಿನಿಮಾಗಾಗಿ ಹೊಸ ಸಾಮ್ರಾಜ್ಯ ಸೃಷ್ಟಿಸೋದು. ಅಲ್ಲಿನ ಪಾತ್ರಗಳನ್ನು ವೈಭವೋಪೇತವಾಗಿ ತೋರಿಸುವುದು. ಭಯಾನಕ ಯುದ್ಧ ಸನ್ನಿವೇಶಗಳನ್ನು ಕಟ್ಟಿಕೊಡೋದ್ರಲ್ಲಿ ರಾಜಮೌಳಿ ಹಾಗೂ ಸಂಜಯ್ ಲೀಲಾ ಬನ್ಸಾಲಿ ಮಾಸ್ಟರ್ಸ್​. ಇದೀಗ ಮಣಿರತ್ನಂ ಅವ್ರು ಕೂಡ ಅವ್ರ ಜಾಡನ್ನೇ ಹಿಡಿದಿದ್ದು, ಇದು ಬಾಕ್ಸ್ ಆಫೀಸ್ ರೂಲ್ ಮಾಡ್ತಿದೆ. ಮೂರೇ ದಿನದಲ್ಲಿ 200 ಕೋಟಿ ಕ್ಲಬ್ ಸೇರಿದ್ದ ಪೊನ್ನಿಯಿನ್ ಸೆಲ್ವನ್, ಇದೀಗ 300 ಕೋಟಿ ಕ್ಲಬ್​ನತ್ತ ನಾಗಾಲೋಟ ಮುಂದುವರೆಸಿದೆ.

ಎಆರ್ ರೆಹಮಾನ್​ರ ಸಂಗೀತವಿರೋ ಈ ಚಿತ್ರ ಪಂಚಭಾಷೆಯಲ್ಲಿ ಪ್ಯಾನ್ ವರ್ಲ್ಡ್​ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳ ಸುರಿಮಳೆ ಆಗ್ತಿದೆ. ಬಿಬಿಸಿ ಕೂಡ ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಟಾಪ್ ನ್ಯೂಸ್​ನಲ್ಲಿ ಸುದ್ದಿ ಬಿತ್ತರಿಸಿದೆ. ಇದು ನಿಜಕ್ಕೂ ಮಣಿರತ್ನಂ ಅವ್ರ ಸಿನಿಮಾ ಪ್ಯಾಷನ್​ನ ಕೈಗನ್ನಡಿಯಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ 

RELATED ARTICLES

Related Articles

TRENDING ARTICLES