Wednesday, January 22, 2025

ರಾಯರ ಮಠದ ಸೀಕ್ರೆಟ್ ರಿವೀಲ್ ಮಾಡಿದ ನಟ ಜಗ್ಗೇಶ್​.!

ಬೆಂಗಳೂರು: ಸ್ಯಾಂಡಲ್​ವುಡ್​ನ ‘ಕಾಂತಾರ’ ಚಿತ್ರದ ಅಬ್ಬರದ ನಡುವೆ ಕಳೆದು ಹೋಗಬಾರದು ಈ ‘ತೋತಾಪುರಿ’ಯ ಘಮಲು. ಇದು ಬರೀ ಸಿನಿಮಾ ಅಲ್ಲ, ಬದುಕಿನ ತಾತ್ಪರ್ಯ. ದಶಕಗಳ ಇತಿಹಾಸದ ಕೈಗನ್ನಡಿ. ಸಂಬಂಧಗಳ ಮೌಲ್ಯಗಳ ಮಂಥನ. ರಾಯರ ಬೃಂದಾವನವೊಂದು ಮುಸ್ಲಿಂ ಮನೆಗೆ ಬರೋ ಥ್ರಿಲ್ಲಿಂಗ್ ಸೀಕ್ವೆನ್ಸ್ ಇಂದಿನ ಕೋಮು ಪಿಡುಗಿಗೆ ಡೋಲೋ-650 ಆಗಲಿದೆ. ಅಷ್ಟೇ ಅಲ್ಲ, ರಾಯರ ಮಠಕ್ಕೆ ಜಾಗ ನೀಡಿದ್ದೇ ನವಾಬ ಅನ್ನೋ ಮಾತನ್ನ ಜಗ್ಗೇಶ್ ಅವ್ರೇ ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಘಟ್ಟದಲ್ಲಿ ಹೇಳಿ ಮಾಡಿಸಿದಂತಹ ಸಿನಿಮಾ ಅದು ತೋತಾಪುರಿ, ಅದೊಂದು ಮಾವು ತಳಿಯ ಹೆಸ್ರು ಅಂತ ಎಲ್ರಿಗೂ ಗೊತ್ತೇಯಿದೆ. ಆ ತೋತಾಪುರಿ ಜಾತಿ, ಧರ್ಮ, ಮತಗಳನ್ನ ಮೀರಿ ಎಲ್ಲರಿಗೂ ಒಂದೇ ಬಗೆಯ ಸ್ವಾದ ನೀಡಲಿದೆ. ಅದನ್ನ ಸವಿಯೋ ನಾಲಿಗೆಗೆ ಯಾವುದೇ ಎಲ್ಲೆ ಇರಲ್ಲ. ಆದ್ರೆ ಪ್ರೀತಿ, ಮದ್ವೆ, ಆಚಾರ, ವಿಚಾರ, ಸಂಬಂಧಗಳ ವಿಚಾರಕ್ಕೆ ಜಾತಿ, ಮತದ ತೊಡಕೇಕೆ ಅನ್ನೋದನ್ನ ಹೇಳೋಕೆ ಈ ಚಿತ್ರ ಹೊರಟಿದೆ.

ಅಫ್ ಕೋರ್ಸ್​ ರಿಷಬ್ ಶೆಟ್ರ ಕಾಂತಾರ ಚೆನ್ನಾಗಿದೆ. ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಅದರ ಅಬ್ಬರದಲ್ಲಿ ತೋತಾಪುರಿ ಅಂತಹ ಸದಭಿರುಚಿಯ ಸಿನಿಮಾ ಮರೆಯಾಗಬಾರದು. ನಿರ್ದೇಶಕ ವಿಜಯ್ ಪ್ರಸಾದ್, ನಿರ್ಮಾಪಕ ಕೆಎ ಸುರೇಶ್ ಅವರ ಸಾಮಾಜಿಕ ಕಳಕಳಿಯ ಉದ್ದೇಶ ಸತ್ತೋಗಬಾರದು. ಸಾಮರಸ್ಯ ಸಂದೇಶಕ್ಕಾಗಿಯೇ ಇಂತಹ ಅದ್ಭುತ ಸ್ಕ್ರಿಪ್ಟ್​​ನ ಒಪ್ಪಿದ ರಾಯರ ಅಪಾರ ಭಕ್ತರಾದ ಜಗ್ಗೇಶ್​ ಅವರ ಆಶಯ ಬದುಕಬೇಕು.

ಸದ್ಯ ಚಿತ್ರದ ಒಂದು ಎಕ್ಸ್​ಕ್ಲೂಸಿವ್ ವಿಡಿಯೋ ರಿವೀಲ್ ಆಗಿದೆ. ಅದು ಚಿತ್ರದ ಅಸಲಿ ಕಂಟೆಂಟ್. ಹೌದು.. ರಾಯರ ಮಠದಲ್ಲಿ ವೀಣೆ ನುಡಿಸೋ ಶಕೀಲಾಭಾನುಗೆ ಒಂದಷ್ಟು ಭಕ್ತರು ಹಾಗೂ ಆಡಳಿತ ಮಂಡಳಿ ಇನ್ನು ವೀಣೆ ನುಡಿಸುವಂತಿಲ್ಲ. ಅಂದಾಗ ಆಕೆ ತುಂಬಾ ನೋವುಂಡುತ್ತಾಳೆ. ಕೊನೆಗೆ ರಾಯರ ಮಠದ ಸ್ವಾಮಿಗಳೇ ಬೃಂದಾವನವೊಂದನ್ನ ಆ ಶಕೀಲಾಭಾನು ಮನೆಗೆ ತಂದುಕೊಡ್ತಾರೆ. ಇದು ನಿಜಕ್ಕೂ ರೋಮಾಂಚನಕಾರಿ ಹಾಗೂ ಭಾವೈಕ್ಯತೆಯ ಬಂಧಗಳ ಗಮ್ಮತ್ತು ಸಾರಲಿದೆ.

ಬೃಂದಾವನದಲ್ಲಿ ನಾನು ರಾಯರನ್ನ ಕಾಣ್ತೇನೆ. ನೀನು ಅಲ್ಲಾನ ಕಾಣ್ತೀಯ. ಮತ್ತೊಬ್ರು ಜೀಸಸ್​ನ ಕಾಣ್ತಾರೆ. ಈ ಬೃಂದಾವನ ತಿಳಿ ಮನಸ್ಸು ಇದ್ದಂತೆ. ಇಲ್ಲಿ ಯಾರು ಯಾರನ್ನ ಬೇಕಾದ್ರೂ ಕಾಣಬಹುದು. ನೀನು ಜೀವ ಇರೋವರೆಗೂ ವೀಣೆ ನುಡಿಸಬಹುದು. ಅದು ಗುಡಿ, ಚರ್ಚ್​, ಮಸೀದಿ ಎಲ್ಲಾದ್ರೂ ಸರಿ ಅನ್ನೋ ಮಾತನ್ನ ಮಠದ ಸ್ವಾಮಿಗಳು ಹೇಳ್ತಾರೆ. ಇಂತಹ ಕಂಟೆಂಟ್ ಪ್ರಸ್ತುತ ಸಮಾಜಕ್ಕೆ ಬೇಕಿದೆ. ಅದನ್ನ ನೀಡೋ ಅಂತಹ ಕಾರ್ಯ ಚಿತ್ರತಂಡ ಮಾಡಿದೆ.

ಅಲ್ಲದೆ ಇದಕ್ಕೆ ಪೂರಕವಾಗಿ ಮಾತನಾಡಿರೋ ನವರಸನಾಯಕ ಜಗ್ಗೇಶ್, ಮಂತ್ರಾಲಯದ ರಾಯರ ಮಠದ ಜಾಗವನ್ನು ಅಂದು ನೀಡಿರೋದೇ ನವಾಬ ಅಂದಿದ್ದಾರೆ. ಅದಕ್ಕೆ ಮದ್ರಾಸ್​ ಮ್ಯೂಸಿಯಂನಲ್ಲಿ ಅಗ್ರಿಮೆಂಟ್ ಕೂಡ ಇದೆ ಎಂದಿದ್ದಾರೆ. ರಾಯರ ಬೃಂದಾವನಕ್ಕೆ ಮುಸ್ಲಿಂ ರಾಜನೇ ಜಾಗ ನೀಡಿದ್ದಾರೆ ಅಂದ್ಮೇಲೆ, ಅಂದಿಲ್ಲದ ಆ ದ್ವೇಷ, ಅಸೂಯೆ, ಮತಗಳ ಮೇಲಿನ ಮಮಕಾರ ಇಂದು ಏಕೆ.

ಇನ್ನು ಬ್ರಿಟಿಷ್ ಗವರ್ನರ್ ಆಗಿದ್ದ ಲಾರ್ಡ್​ ವೆಲ್ಲೆಸ್ಲಿ ಕೂಡ ರಾಯರ ಮಠದ ಬಗ್ಗೆ ಹೇಳಿಕೊಂಡಿದ್ದುಂಟು. ಅವ್ರ ತಲೆಮಾರಿನ ಜನ ಇಂದಿಗೂ ಮಂತ್ರಾಲಯದ ಮಠಕ್ಕೆ ಬಂದು ಹೋಗ್ತಾರಂತೆ. ಇದನ್ನ ಖುದ್ದು ಜಗ್ಗೇಶ್ ಅವ್ರೇ ಹೇಳಿದ್ದಾರೆ.

ತೋತಾಪುರಿ ಬರೀ ಪೋಲಿ ಜೋಕ್ಸ್ ಇರೋ ಯೂತ್​ಫುಲ್ ಸಿನಿಮಾ ಅಲ್ಲ. ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್. ಇಲ್ಲಿ ಎಲ್ಲಾ ಸಮಯದಾಯದ ಮಂದಿ ಮಸ್ಟ್ ನೋಡಲೇಬೇಕಾದ ಸಾಕಷ್ಟು ಸಂದೇಶಗಳಿವೆ. ಅದನ್ನ ಅರಿತರೆ ಸಿನಿಮಾದ ಉದ್ದೇಶ ಫಲಪ್ರದವಾಗಲಿದೆ. ಚಿತ್ರತಂಡಕ್ಕೂ ಸಾರ್ಥಕಭಾವ ಸಿಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES