Thursday, January 23, 2025

ಮುದ್ರಣ‌ಕಾಶಿಯಲ್ಲಿ ಹಾಡುಹಗಲೇ ಮಹಿಳೆ‌ ಕೊಲೆ : ಹತ್ಯೆ‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗದಗ: ಮುದ್ರಣ ಕಾಶಿ ಗದಗ ನಗರದಲ್ಲಿ ಹಾಡುಹಗಲೇ ಮಹಿಳೆಯ‌ ಭೀಕರ ಹತ್ಯೆಯೊಂದು ನಡೆದಿದೆ. ಮಹಿಳೆಯೋರ್ವಳನ್ನ ಚಾಕುವಿನಿಂದ ಕುತ್ತಿಗೆಗೆ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಗರದ ಮುಳಗುಂದ ನಾಕಾ ಬಳಿ ಇರೋ ಬೇಕರಿ ಎದುರಲ್ಲೇ ಈ‌ ಕೊಲೆ‌ ನಡೆದಿದ್ದು,ಮೀನಾಜ್ ಬೇಪಾರಿ (28) ಹತ್ಯೆಗೀಡಾದ ಮಹಿಳೆಯಾಗಿದ್ದಾಳೆ. ಜನನಿಬೀಡ ಪ್ರದೇಶದಲ್ಲೇ ಮಹಿಳೆ ಕೊಲೆಯಾದ ಹಿನ್ನೆಲೆ ಅವಳಿ ನಗರದ ಜನತೆ‌ ಬೆಚ್ಚಿ ಬಿದ್ದಿದ್ದಾರೆ.

ಗದಗ ನ್ಯಾಯಾಲಯದಿಂದ ಆಟೋ ಮೂಲಕ‌ ಮಹಿಳೆ ತನ್ನ ಮಗುವನ್ನ ಕರೆದುಕೊಂಡು ಮುಳಗುಂದ ನಾಕಾ ಸಮೀಪ ಇರೋ ಬೇಕರಿಯೊಂದಕ್ಕೆ ಬಂದಿದ್ದಾಳೆ. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ಹಂತಕರು,ಸೇರಿಕೊಂಡು ಮಹಿಳೆ ಆಟೋದಿಂದ ಇಳಿಯುತ್ತಲೇ ಆಕೆಯ‌ ಮೇಲೆ‌ ಹಲ್ಲೆ ನಡೆಸಿ, ಆಕೆಯ ಕುತ್ತಿಗೆಗೆ ಚಾಕು ಇರಿದಿದ್ದಾರೆ. ಸ್ಥಳದಲ್ಲೇ ನೆಲಕ್ಕೆ ಬಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಕೊನೆಯುಸಿರುಳೆದಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ,ಚೇತನ್ ಕುಮಾರ್ ಹುಳಕಣ್ಣವರ, ರೋಹನ್ ಕುಮಾರ್ ಲಿಗಾಡಿ, ಶ್ರೀನಿವಾಸ ಶಿಂಧೆ ಹಾಗೂ ಕುಮಾರ ಮಾರನಬಸರಿ ಇವರೆಲ್ರೂ ಸಹ ಈಗಾಗಲೇ ಪೊಲೀಸ್ ಕೈವಶವಾಗಿದ್ದಾರೆ. ಇನ್ನು ನಾಲ್ವರು ಆರೋಪಿತರಲ್ಲಿ ಇಬ್ಬರು ಆರೋಪಿತರು ಠಾಣೆಗೆ ಬಂದು ಶರಣಾಗಿದ್ದರೆ ಉಳಿದ ಇಬ್ಬರನ್ನ ಪೊಲೀಸರು‌ ಬಂಧಿಸಿದ್ದಾರೆ.

ಈ ಹಿಂದೆ 2020 ರಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಮೇಶ್ ಪರುಶುರಾಮ ಹುಳಕಣ್ಣನವರ ಹಾಗೂ ಇಂದು ಕೊಲೆಯಾದ ಮಿನಜಾ ಬೇಪಾರಿ ಇವರಿಬ್ಬರ ನಡುವೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ, ಈಕೆಯ ಪತಿಯಾದ ವಾಸಿಂ ಬೇಪಾರಿ ಎಂಬಾತನು, ರಮೇಶ ಪರಶುರಾಮ್ ಹುಳಕಣ್ಣವರ ಈತನನ್ನ ಅಂದು ಕೊಲೆಗೈದಿದ್ದನು. ಕೊಲೆಯಾಗಿದ್ದ ಮೃತ ರಮೇಶ ಹಾಗೂ ಇಂದು ನಡೆದ ಮಹಿಳೆ ಕೊಲೆ ಆರೋಪದಲ್ಲಿ ಬಂಧಿತನಾಗಿರೋ ಚೇತನ್ ಕುಮಾರ ಇವರಿಬ್ಬರೂ ಸೋದರರಾಗಿದ್ದು ಹಳೆ ವೈಶಮ್ಯವೇ ಮಹಿಳೆ‌ ಕೊಲೆಗೆ ಕಾರಣ ಎನ್ನಲಾಗಿದೆ.

ಇನ್ನು ಕೊಲೆಯಾದ ಘಟನಾ ಸ್ಥಳಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶಿವಪ್ರಕಾಶ್ ದೇವರಾಜು, ಡಿವೈಎಸ್ ಪಿ ಶಿವಾನಂದ ಪವಾಡಶೆಟ್ಟಿ ಸೇರಿದಂತೆ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

RELATED ARTICLES

Related Articles

TRENDING ARTICLES