Wednesday, January 22, 2025

ಸಾರಿಗೆ ಸಿಬ್ಬಂದಿಗಿಲ್ಲ ಆಯುಧ ಪೂಜೆ ಸಂಭ್ರಮ..!

ಬೆಂಗಳೂರು : ರಾಜ್ಯಾದ್ಯಂತ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಜನ ತಮ್ಮ ವಾಹನಗಳನ್ನು ಸ್ವಚ್ಚಗೊಳಿಸಿ ಪೂಜೆ ಮಾಡ್ತಾರೆ.ಸಾರಿಗೆ ನಿಗಮಗಳಲ್ಲಿಯೂ ವರ್ಷವಿಡೀ ತಾವು ಬಳಸುವ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ಪೂಜೆ ಮಾಡುವುದೇ ಡ್ರೈವರ್ಸ್-ಕಂಡಕ್ಟರ್‍ಸ್‌ಗೆ ಎಲ್ಲಿಲ್ಲದ ಸಂಭ್ರಮ. ಬೇರೆ ಯಾವುದೇ ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸದಷ್ಟು ಖುಷಿ, ಸಂತೋಷವನ್ನು ಆಯುಧಪೂಜೆಯಲ್ಲಿ ಅನುಭವಿಸುತ್ತಾರೆ.ಹಾಗಾಗಿಯೇ ಬಸ್‌ಗಳ ಸ್ವಚ್ಛತೆ ಹಾಗೂ ಸಿಂಗಾರಕ್ಕೆ ಒಂದಷ್ಟು ಹಣವನ್ನು ಬಿಡುಗಡೆ ಮಾಡುವ ಸಂಪ್ರದಾಯವೂ ನಿಗಮದಲ್ಲಿ ಇದೆ.

ಆದರೆ, ಬಸ್‌ಗಳ ಸ್ವಚ್ಛತೆ, ಸಿಂಗಾರ ಹಾಗೂ ಪೂಜೆಗೆ ಬೇಕಾದಷ್ಟು ಹಣವನ್ನು ಬಿಡುಗಡೆ ಮಾಡಬೇಕಲ್ಲವೇ..? ನಿಮಗೆ ಆಶ್ಚರ್ಯವಾಗಬಹುದು.ಬಿಎಂಟಿಸಿ ಕೆಎಸ್ಆರ್ಟಿಸಿ ಬಸ್ ಗೆ ಪೂಜೆ ಮಾಡಲು ಪ್ರತಿ ಬಸ್‌ಗೆ ಕೇವಲ 100 ರೂಪಾಯಿ ನೀಡಲಾಗಿದೆ‌.ಹೀಗಾಗಿ 100 ರೂ.ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಸಿಬ್ಬಂದಿ ಇದ್ದಾರೆ.

ಯಾವಾಗಲೂ ಹೂವು-ಬಾಳೆ ಕಂದು-ತೋರಣಗಳನ್ನು ಖರೀದಿಸಿ ಬಸ್‌ಗಳನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುವುದು ಅವರ ವಾಡಿಕೆ.ಬಸ್‌ಗಳನ್ನು ತೇರಿನಂತೆ ಅಲಂಕರಿಸಿ ಧ್ವನಿವರ್ಧಕದಲ್ಲಿ ಹಾಡನ್ನು ಹಾಕಿದರೇನೇ ಆಯುಧಪೂಜೆಗೆ ಸಂಭ್ರಮ..ಆದ್ರೆ, ಸಾರಿಗೆ ನಿಗಮದ ಚಾಲಕ ಹಾಗೂ ನಿರ್ವಾಹಕರಿಗೆ ಆಯುಧ ಪೂಜೆ ಮಾಡಿ ಎಂದು ಬಿಡಿಗಾಸು ನೀಡಿದೆ.ಇಲಾಖೆಯ ಕಾರು, ಜೀಪುಗಳಿಗೆ 40 ರೂಪಾಯಿ,ಕರೋನಾ ಹಾಗೂ ವೋಲ್ವೋ ಬಸ್​ಗೆ ಕೇವಲ 100 ರೂಪಾಯಿ ಬಿಡುಗಡೆ ಮಾಡಿದೆ. ದುಬಾರಿ ದುನಿಯಾದಲ್ಲಿ ಬೂದುಗುಂಬಳಕಾಯಿಗೇ 40 ರೂಪಾಯಿಗಿಂತ ಹೆಚ್ಚು ನೀಡಬೇಕಾಗಿದೆ. ಆದ್ರೆ, ನಿಗಮಗಳು ಬಿಡುಗಡೆ ಮಾಡಿರುವ ಪುಡಿಗಾಸಿನಲ್ಲಿ ಹೇಗೆ ಆಯುಧ ಪೂಜೆ ಮಾಡೋಕಾಗುತ್ತೆ? ವರ್ಷಕ್ಕೊಮ್ಮೆ ಮಾಡುವ ಆಯುಧ ಪೂಜೆಗೆ ಇಷ್ಟು ಕಡಿಮೆ ಹಣ ನೀಡಿದ್ರೆ ಹೇಗೆ? ನೀವು ಕೊಟ್ಟ ಹಣದಲ್ಲಿ ಆರು ನಿಂಬೆಹಣ್ಣು ಕೂಡಾ ಬರೋದಿಲ್ಲ. ಕೊಡೋದಾದ್ರೆ ಹೆಚ್ಚಿನ ಹಣ ನೀಡಿ ಇಲ್ಲದಿದ್ರೆ ನಿಮ್ಮ ಹಣ ಬೇಡ ಎಂದು ಚಾಲಕ ಹಾಗು ನಿರ್ವಾಹಕರು ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಂದು ಬಸ್ಸಿಗೆ ಸರಳವಾಗಿ ಪೂಜೆ ಮಾಡಬೇಕು ಎಂದರೆ ಎರಡು ಬಾಳೆ ಕಂದು, 4 ಮಾರು ಹೂ, 6 ನಿಂಬೆಹಣ್ಣು, ಬಾಳೆ ಹಣ್ಣು, ತೆಂಗಿನಕಾಯಿ, ಕರ್ಪೂರ ಕುಂಕುಮ, ಬೂದು ಕುಂಬಳಕಾಯಿ, ವಿಭೂತಿ ಬೇಕು.ಆದ್ರೂ ನಿಗಮ ಜಿಪುಣತನ ತೋರಿಸಿ ಪೂಜೆಗೆ ಬಿಡಿಕಾಸು ನೀಡಿರೋದು ಇಡೀ ಸಾರಿಗೆ ನೌಕರರ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES