Monday, December 23, 2024

ಸವದತ್ತಿ ರೇಣುಕಾ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತರ ದಂಡು

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಭಕ್ತರ ದಂಡೆ ಇಂದು ಹರಿದು ಬರುತ್ತಿದೆ. ಹಣೆಯ ತುಂಬ ಬಂಡಾರ, ಬಾಯಿತುಂಭಾ ಉಧೋ ಉಧೋ ಯಲ್ಲಮ್ಮ ದೇವಿ ನಿನ್ಹಾಲ್ಕ ಉಧೋ ಎಂಬ ಜೈಕಾರ. ಏಳುಕೊಳ್ಳದ ನಾಡಿನಲ್ಲಿ ಭಕ್ತಿಯ ಹೊಳೆ ಹರಿಯುತ್ತಿದ್ದು, ದಸರಾ ಸಂಭ್ರಮ ಕಳೆಗಟ್ಟಿದೆ.

ನವರಾತ್ರಿ ಬಂತೆಂದರೆ ಸಾಕು ಜನರು ಶಕ್ತಿ ದೇವತೆಗಳ ದರ್ಶನ ಪಡೆಯೋದು ಸಂಪ್ರದಾಯ. ದಕ್ಷಿಣ ಕರ್ನಾಟಕದವರು ಮೈಸೂರಿನಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಿ ದರ್ಶನ ಪಡೆದರೆ, ಉತ್ತರ ಕರ್ನಾಟಕದವರು ಈ ಭಾಗದ ಶಕ್ತಿ ದೇವತೆ ಬೆಳಗಾವಿ ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಹೀಗಾಗಿ ನವರಾತ್ರಿ ಬಂದ್ರೆ ಸಾಕು ಸವದತ್ತಿಯಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿರುತ್ತೆ.

ಉತ್ತರ ಕರ್ನಾಟಕದ ಜನರ ಪಾಲಿನ ಆರಾಧ್ಯ ದೇವತೆ, ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನಕ್ಕೆ ಭಕ್ತರ ದಂಡೆ ಹರಿದು ಬಂದಿದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷ ಭಕ್ತರಿಗೆ ದರ್ಶನದ ಭಾಗ್ಯ ದೊರಕದ ಹಿನ್ನೆಲೆ ದೇವಿಯ ದರ್ಶನಕ್ಕೆ ನಾ ಮುಂದು ತಾಮುಂದು ಎಂದು ರಾಜ್ಯ ಹೊರ ರಾಜ್ಯದಿಂದ ಜನರು ದರ್ಶನಕ್ಕೆ ಬಂದಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಸವದತ್ತಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚು, ಅಷ್ಟೇ ಅಲ್ಲದೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಗೋವಾ, ಆಂಧ್ರ ತಮಿಳುನಾಡುಗಳಿಂದಲೂ ಲಕ್ಷಾಂತರ ಭಕ್ತರು ರೇಣುಕಾ ಎಲ್ಲಮ್ಮ ದೇವತೆಯ ದರ್ಶನಕ್ಕೆ ಬರುತ್ತಾರೆ.

ಒಂದು ವರ್ಷದಲ್ಲಿ ಏಳು ಜಾತ್ರೆಗಳು ನಡೆಯುವುದು ಈ ಕ್ಷೇತ್ರದ ವಿಶೇಷ. ದವನ, ಮಹಾನವಮಿ, ಗೌರಿ, ಹೊಸ್ತಿಲ, ಬನದ ಹಾಗೂ ಭರತ ಹುಣ್ಣಿಮೆಗಳಂದು ಇಲ್ಲಿ ಜಾತ್ರೆ ನಡೆಯುತ್ತದೆ. ಬನದ ಹಾಗೂ ಭರತ ಹುಣ್ಣಿಮೆ ಸಮಯದಲ್ಲಿ ನಡೆಯುವ ಜಾತ್ರೆಗಳು ಅತ್ಯಂತ ದೊಡ್ಡ ಜಾತ್ರೆಗಳು. ಈ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡು ದೇವಿಯ ದರ್ಶನವನ್ನು ಪಡೆಯುತ್ತಾರೆ. ಸವದತ್ತಿ ರೇಣುಕಾ ಯಲ್ಲಮ್ಮ ಕ್ಷೇತ್ರಕ್ಕೆ ಸುಮಾರು ಮೂರು ಸಾವಿರ ವರ್ಷಗಳಷ್ಟು ಇತಿಹಾಸವಿದೆ.

ಸೌಂದತ್ತಿ ಅಥವಾ ಸವದತ್ತಿ ಪುರಾಣ ಪ್ರಸಿದ್ಧ ಶಕ್ತಿದೇವತೆಯ ಕ್ಷೇತ್ರ. ಸೌಗಂದವರ್ತಿ ಅಥವಾ ಸೌಗಂದಿಕಾಪುರ ಎಂಬುದು ಇದರ ಪ್ರಾಚೀನ ಹೆಸರು. ಇದು ತಾಯಿ ರೇಣುಕಾ ಯಲ್ಲಮ್ಮ ಅಥವಾ ತಾಯಿ ಎಲ್ಲಮ್ಮನ ನೆಲೆವೀಡು. ಇಂಥ ಪುಣ್ಯ ಕ್ಷೇತ್ರದಲ್ಲಿ ನವರಾತ್ರಿಯಂದು ಲೋಕ ಕಲ್ಯಾಣಾರ್ಥ ವಿಶೇಷ ಪೂಜೆ ಹವನ ನೆರವೇರುತ್ತದೆ. ಈ ಸಂದರ್ಭದಲ್ಲಿ ಭಕ್ತರ ನಿಯಂತ್ರಿಸಲು ಆಡಳಿತ ಮಂಡಳಿ ಹರಸಾಸ ಪಡಬೇಕಾಗುತ್ತದೆ.

ನವರಾತ್ರಿಯ ಸಂಭ್ರಮ ಬೆಳೆಗಾವಿ ಜಿಲ್ಲೆ ಸವದತ್ತಿಯಲ್ಲಿ ಕಳೆಗಟ್ಟಿದೆ. ಕ್ಷೇತ್ರದಲ್ಲಿ ಲಕ್ಷಾಂತರ ಭಕ್ತರು ಒಬ್ಬರಿಗೊಬ್ಬರು ಭಂಡಾರವನ್ನು ಎರಚಿ ದೇವಿಯ ದರ್ಶನ ಭಾಗ್ಯ ಪಡೆದು ಪುನಿತರಾಗಿದ್ದಾರೆ. ಯಲ್ಲಮ್ಮ ದೇವಿಯ ದೇವಸ್ಥಾನದ ಆಡಳಿತ ಮಂಡಳಿಯು ಭಂದ ಭಕ್ತರಿಗೆ ಎಲ್ಲ ಸೌಕರ್ಯಗಳನ್ನು ಮಾಡಿ ಸಹಕರಿಸುತ್ತಿದೆ.

ಕ್ಯಾಮರಾಮನ್ ರಾಹುಲ್‌ ಜೊತೆ ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES

Related Articles

TRENDING ARTICLES