ರಾಮನಗರ : BJP ಸರ್ಕಾರ ಬಂದ ಮೇಲೆ ರಾಮನಗರ ಜಿಲ್ಲೆಯಲ್ಲಿ ಎಷ್ಟು ಅಭಿವೃದ್ಧಿ ಆಗಿದೆ ಎಂಬುದನ್ನು ಬಹಿರಂಗ ಚರ್ಚೆ ಮಾಡೋಣ ಬನ್ನಿ. ಆಗ ಯಾರ ಆತ್ಮಸಾಕ್ಷಿ ಏನು ಎಂಬುದು ಜನರಿಗೂ ತಿಳಿಯುತ್ತದೆ ಎಂದು ಸಚಿವ ಅಶ್ವತ್ಥ್ ನಾರಾಯಣಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸವಾಲ್ ಮಾಡಿದ್ದಾರೆ.
ಇನ್ನು, MLC ಕೋರಿಕೆ ಮೇರೆಗೆ ಎಂದು ಬಿಡುಗಡೆ ಮಾಡಿದ 50 ಕೋಟಿ ರೂ. ಒಳಗುಟ್ಟಿನ ಬಗ್ಗೆಯೂ ಚರ್ಚಿಸೋಣ ಬನ್ನಿ. ನಾನು ತಯಾರಿದ್ದೇನೆ ಎಂದಿದ್ದಾರೆ. ಅಧಿಕಾರ ಬೇಕಿದ್ದರೆ ನೀವು ಚುನಾವಣೆಯಲ್ಲಿ ಪೂರ್ಣ ಬಹುಮತ ಸಿಗುವವರೆಗೂ ಕಾಯಬಹುದಿತ್ತಲ್ಲವೇ? ಆದರೆ, ಹಪಾಹಪಿಯಿಂದ ಅಡ್ಡಮಾರ್ಗ ಹಿಡಿದಿದ್ದು ಏಕೆ? ಅಕ್ಕಪಕ್ಕದ ಪಕ್ಷಗಳ ಶಾಸಕರನ್ನು ಅಪಹರಿಸಿ ಆಪರೇಷನ್ ಕಮಲದ ಸರ್ಕಾರ ಮಾಡಿದ್ದು ಯಾಕೆ? ಇದು ವಾಮಮಾರ್ಗವೋ? ಸನ್ಮಾರ್ಗವೋ? ಸ್ಪಲ್ಪ ಹೇಳಿ ಎಂದು ಕಿಡಿಕಾರಿದ್ದಾರೆ.
ಅದಲ್ಲದೇ, ಅಧಿಕಾರ ಬರುತ್ತದೆ, ಹೋಗುತ್ತದೆ ಎಂದು ವೇದಾಂತ ಹೇಳಿದ್ದೀರಿ. ಹೌದು; ಇಂಥ ಉದಾತ್ತ, ಆದರ್ಶ ಚಿಂತನೆಯ, ವಿಶಾಲ ಹೃದಯ ವೈಶಾಲ್ಯವುಳ್ಳ ನಿಮ್ಮಂಥ ಪ್ರಾಜ್ಞರೇ ಆಪರೇಶನ್ ಕಮಲ ಎಂಬ ಪಾಪ ಎಸಗಿದ್ದೇಕೆ? ನಮ್ಮ ಶಾಸಕರ ಮನೆಯಲ್ಲಿ ಹಣ ಇಟ್ಟು ಬಂದ್ದಿದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ರು. ಅಭಿವೃದ್ಧಿ ಕೆಲಸ ಎಂದರೇನು ಅಶ್ವತ್ಥ್ ನಾರಾಯಣ ಅವರೇ, ವಾಮಮಾರ್ಗ ಎಂದರೆ ಯಾವುದು? ಇವೆರಡರಲ್ಲೂ ತಮಗೆ ಒಳ್ಳೇ ಅನುಭವವೇ ಇದೆ. ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ʼಕಳ್ಳಮಾರ್ಗʼದಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಹೊರಟಿದ್ದು, ಕ್ಷೇತ್ರದ ಶಾಸಕರನ್ನೇ ಕತ್ತಲೆಯಲ್ಲಿ ಇಟ್ಟಿದ್ದನ್ನು ಏನೆಂದು ಕರೆಯಬೇಕು? ಇದೇನಾ ನೀವು ಹೇಳುವ ʼರಾಜಮಾರ್ಗʼ? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿ ಆಕ್ರೋಶ ಹೊರಹಾಕಿದ್ದಾರೆ.