ಉಕ್ರೇನ್‍ನ ನಾಲ್ಕು ಪ್ರದೇಶಗಳನ್ನು ರಷ್ಯಾವಶಪಡಿಸಿಕೊಂಡ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿ ನ್ಯಾಟೋ ಸದಸ್ಯತ್ವವವನ್ನು ಆದಷ್ಟು ಬೇಗ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ.
ಉಕ್ರೇನ್‍ನ ನಾಲ್ಕು ಪ್ರದೇಶಗಳಾದ ಡಾನೆಸ್ಕ್, ಖೇರ್ಸಾನ್, ಲುಹಾಂಸ್ಕ್ ಮತ್ತು ಝೆಪೋರ್‌ಝಿಯಾ ಪ್ರದೇಶಗಳನ್ನು ರಷ್ಯಾ ವಶಕ್ಕೆ ಪಡೆದಿದೆ. ಈ ನಾಲ್ಕು ಪ್ರದೇಶಗಳನ್ನು ರಷ್ಯಾದೊಂದಿಗೆ ವಿಲೀನ ಮಾಡಿಕೊಳ್ಳಲಾಗಿದೆ. ಕ್ರೆಮ್ಲಿನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ವಿಲೀನ ಪ್ರಕ್ರಿಯೆ ನಡೆಯಿತು.
ನಂತರ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‍ನ ಸುಮಾರು ಶೇ.15ರಷ್ಟು ಭೂಭಾಗವಿರುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಪ್ರದೇಶಗಳು ಶಾಶ್ವತವಾಗಿ ರಷ್ಯಾ ಪಾಲಾಗಲಿವೆ ಎಂದು ತಿಳಿಸಿದ್ದಾರೆ. ಇತ್ತ ರಷ್ಯಾ ಈ ನಡೆಯ ಬೆನ್ನಲ್ಲೇ ಝೆಲೆನ್ಸ್ಕಿ, ನ್ಯಾಟೋ ಸದಸ್ಯತ್ವ ತ್ವರಿತವಾಗಿ ಕೊಡಬೇಕೆಂದು ಪಟ್ಟುಹಿಡಿದಿದ್ದಾರೆ. ನಾವು ಮಿತ್ರಪಕ್ಷಗಳೊಂದಿಗೆ ಮೈತ್ರಿಗೆ ಸಂಬಂಧಿಸಿದ ಎಲ್ಲಾ ನಿಯಮಗಳನ್ನೂ ಪಾಲಿಸಿದ್ದೇವೆ. ಹಾಗಾಗಿ ನಮಗೆ ಆದಷ್ಟೂ ಬೇಗ ಸದಸ್ಯತ್ವ ನೀಡುವಂತೆ ಕೋರಿರುವ ಅರ್ಜಿಗೆ ಸಹಿ ಹಾಕಿ ನ್ಯಾಟೋಗೆ ನೀಡಿದ್ದಾರೆ. ಈ ಮೂಲಕ ನಾವು ನಿರ್ಣಾಯಕ ಹೆಜ್ಜೆ ಇಡುತ್ತಿದ್ದೇವೆ ಎಂದು ಝೆಲೆನ್ಸ್ಕಿ ರಷ್ಯಾ ವಿರುದ್ಧ ನ್ಯಾಟೋ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದಾರೆ.