Wednesday, January 22, 2025

400ಕ್ಕೂ ಹೆಚ್ಚು ಸಂತ್ರಸ್ತರಿಗೆ ಬಿಡಿಎ ಡಬಲ್ ದೋಖಾ..?

ಬೆಂಗಳೂರು : ಮಾಡಿದ ತಪ್ಪುಗಳನ್ನ ಹೇಗೋ ಹಾಗೆ ಕವರ್ ಮಾಡಿಕೊಳ್ಳಲು ಬಿಡಿಎ ಅಧಿಕಾರಿಗಳು ಕಸರತ್ತು ನಡೆಸ್ತಿದ್ದಾರೆ. ಕೆಂಪೇಗೌಡ ಲೇಔಟ್ ನಲ್ಲಿ ಬಫರ್ ಜೋನ್ ಒತ್ತುವರಿ ಮಾಡಿ ಭೂಸ್ವಾಧೀನ ಮಾಡಲಾಗಿತ್ತು. ಅದರ ಪರಿಣಾಮ ನಿವೇಶನ ಪಡೆದವರು ಎದುರಿಸುತ್ತಿದ್ದಾರೆ. ಮಳೆ ಬಂದ್ರೆ ಸಾಕು ಕೆರೆ ಅಂಗಳ ಪ್ರದೇಶ ಕೆರೆಯಂತಾಗಿಬಿಡುತ್ತೆ. ಅಲ್ಲಿ ಮನೆ ಕಟ್ಟಿಕೊಳ್ಳಲಾಗದೇ ನಿವೇಶನದಾರರ ಸಂಕಷ್ಟ ಅಷ್ಟಿಷ್ಟಲ್ಲ. ಈ ಅವಾಂತರದಿಂದ ಎಚ್ಚೆತ್ತಿರುವ ಬಿಡಿಎ, ಮಳೆಹಾನಿಗೊಳಪಟ್ಟವರಿಗೆ ಕೆಂಪೇಗೌಡ ಲೇಔಟ್ ನಲ್ಲೇ ಬದಲಿ ನಿವೇಶನ ನೀಡಲು ಮುಂದಾಗಿತ್ತು. ಈ ಸಂಬಂಧ ಸುಮಾರು 40 ಎಕರೆ ಜಾಗವನ್ನೂ ಗುರುತಿಸಲಾಗಿತ್ತು. 400 ಕ್ಕೂ ಹೆಚ್ಚು ಜನರಿಗೆ ಸುರಕ್ಷಿತ ಜಾಗದಲ್ಲಿ ಬದಲಿ ನಿವೇಶನ ನೀಡಲು ತೀರ್ಮಾನಿಸಿದ್ದೇವೆ ಅಂತಾ ಇದೇ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಹೇಳಿದ್ರು. ಆದ್ರೆ, ವರ್ಷಗಳು ಕಳೆಯುತ್ತಾ ಬಂದ್ರೂ ಒಂದಿಂಚು ಜಾಗವೂ ಸಿಕ್ಕಿಲ್ಲ.

ಇನ್ನು ನೀರು ನಿಲ್ಲೋ ಕೆರೆ ಅಂಗಳ ಜಾಗದಲ್ಲಿ ಹೈಟೆಕ್ ಪಾರ್ಕ್ ನಿರ್ಮಾಣಕ್ಕೆ ಬಿಡಿಎ ಅಧಿಕಾರಿಗಳು ಬ್ಲೂಪ್ರಿಂಟ್ ರೆಡಿ ಮಾಡಿಕೊಂಡಿದ್ದಾರೆ. ಸುಮಾರು ಐದಾರು ವರ್ಷಗಳ ನಂತರ ಕೆರೆ ತುಂಬಿರೋದ್ರಿಂದ ಹೀಗಾಗಿದೆ. ಕೆರೆ ದಂಡೆಗೆ ಸಮೀಪವಾಗಿ ಎಂಟು ಅಡಿ ಆಳದಿಂದ ತಡೆಗೋಡೆ ನಿರ್ಮಾಣ ಮಾಡಿ, ಪಾರ್ಕ್ ನಿರ್ಮಾಣ ಮಾಡೋದಕ್ಕೆ ತೀರ್ಮಾನ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಲೇಔಟ್‌ನಲ್ಲಿ ಭೂಮಿ ಲಭ್ಯವಾಗಿದ್ರೂ, ಲಿಟಿಗೇಶನ್ ಸಮಸ್ಯೆಗಳು ಬಗೆಹರಿದಿಲ್ಲ. ಲೇಔಟ್‌ನಲ್ಲಿ ಬದಲಿ ನಿವೇಶನ ಕೊಡಲು ಸದ್ಯಕ್ಕೆ ಸಾಧ್ಯವಾಗ್ತಿಲ್ವಂತೆ.

ಒಟ್ನಲ್ಲಿ ಕೆಂಪೇಗೌಡ ಲೇಔಟ್ ಗೆ ಒಂದಿಲ್ಲೊಂದು ಗ್ರಹಣ ಹಿಡಿಯುತ್ತಲೇ ಇದೆ. ನಿವೇಶನಗಳು ಹಂಚಿಕೆಯಾಗಿ ದಶಕಗಳೇ ಕಳೆದ್ರೂ ರಸ್ತೆ, ನೀರು, ವಿದ್ಯುತ್ ಸಂಪರ್ಕ ಸಿಕ್ಕೇ ಇಲ್ಲ. ನಡೆದಿರೋ ಕಾಮಗಾರಿಗಳೆಲ್ಲಾ ಕಳಪೆ. ಈಗ ಮಳೆಯಿಂದ ಆಗಿರೋ ಅವಾಂತರಕ್ಕೆ ಮನೆ ಕಟ್ಟಬೇಕೋ, ಬೇಡ್ವೋ ಅನ್ನೋ ಚಿಂತೆಯಲ್ಲಿ ನಿವೇಶನದಾರರಿದ್ದಾರೆ.

ಆನಂದ್ ನಂದಗುಡಿ ಸ್ಪೆಶಲ್ ಬ್ಯೂರೋ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES