ಇಸ್ಲಾಮಾಬಾದ್: ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಮಹಿಳಾ ನ್ಯಾಯಾಧೀಶರ ವಿರುದ್ಧ ಬೆದರಿಕೆ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇಸ್ಲಾಮಾಬಾದ್‌ನ ಮ್ಯಾಜಿಸ್ಟ್ರೇಟ್ ಬಂಧನ ವಾರಂಟ್ ಹೊರಡಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಝೆಬಾ ಚೌಧರಿ ಅವರಿಗೆ ಬೆದರಿಕೆ ಹಾಕಿದ್ದಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ಆಗಸ್ಟ್ 20 ರಂದು ದಾಖಲಾದ ಪ್ರಕರಣದಲ್ಲಿ ಇಸ್ಲಾಮಾಬಾದ್‌ನ ಮರ್ಗಲ್ಲಾ ಪೊಲೀಸ್ ಠಾಣೆಯ ಮ್ಯಾಜಿಸ್ಟ್ರೇಟ್ ವಾರಂಟ್ ಹೊರಡಿಸಿದ್ದಾರೆ.
506, 504, 189, 188 ಸೆಕ್ಷನ್ ಅಡಿ ಇಮ್ರಾನ್ ಖಾನ್ ಮೇಲೆ ಎಫ್ಐಆರ್ ದಾಖಲಾಗಿತ್ತು. ಇಮ್ರಾನ್ ಖಾನ್ ಅಫಿಡವಿಟ್ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ವಾರಂಟ್ ಹೊರಡಿಸಲಾಗಿದೆ.
ಈ ಸಂಬಂಧ ಇಮ್ರಾನ್ ಖಾನ್ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿ ಯಾವುದೇ ನ್ಯಾಯಾಲಯ ಮತ್ತು ನ್ಯಾಯಾಂಗದ ಅದರಲ್ಲೂ ಕೆಳಮಟ್ಟದ ನ್ಯಾಯಾಂಗದ ಘನತೆಗೆ ಧಕ್ಕೆ ತರುವಂತಹ ಯಾವುದೇ ಕಾರ್ಯವನ್ನು ಭವಿಷ್ಯದಲ್ಲಿ ಮಾಡುವುದಿಲ್ಲ ಎಂದಿದ್ದಾರೆ.