Wednesday, January 22, 2025

AICC ಸಾರಥಿ ಆಗ್ತಾರಾ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ : ಚುನಾವಣೆಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಕೈ ಪಡೆಗೆ ಬಲವಾದ ನಾಯಕತ್ವದ ಕೊರತೆ ಎದ್ದು ಕಾಣ್ತಿದೆ. ಇದ್ರ ಜೊತೆಗೆ, ಅಧ್ಯಕ್ಷರ ಆಯ್ಕೆ ಕಸರತ್ತು ಸಾಕಷ್ಟು ದಿನಗಳಿಂದಲೂ ನಡೆಯುತ್ತಿದ್ರೂ, ಯಾರಾಗ್ತಾರೆ ಅನ್ನೋ ಗೊಂದಲಗಳು ಎದ್ದಿದ್ವು. ಈ ಮಧ್ಯೆ, ರಾಹುಲ್‌ ಗಾಂಧಿ ಪರ ಒಂದಷ್ಟು ನಾಯಕರು ಬ್ಯಾಟ್‌ ಬೀಸಿದ್ರೆ, ಮತ್ತಷ್ಟು ನಾಯಕರು ಪ್ರಿಯಾಂಕಾ ವಾದ್ರಾ ಅಧ್ಯಕ್ಷರಾಗ್ಲಿ ಎಂದಿದ್ರು. ಹಾಗೆ, ಸೋನಿಯಾ ಗಾಂಧಿ ಪರ ಸಾಕಷ್ಟು ಹಿರಿಯ ನಾಯಕರು ಧ್ವನಿ ಎತ್ತಿದ್ರು. ಆದ್ರೆ, ಕುಟುಂಬ ರಾಜಕಾರಣ ಅನ್ನೋ ಹಣೆ ಪಟ್ಟಿಕಟ್ಟಿಕೊಂಡು ಮುಂಬರುವ ಚುನಾವಣೆಯಲ್ಲಿ ಫೈಟ್‌ ಸುಲಭವಾಗಿಲ್ಲ. ಯಾಕಂದ್ರೆ, ಹೋದಲ್ಲಿ ಬಂದಲ್ಲಿ ಮೋದಿ, ಅಮಿತ್‌ ಶಾ ಸೇರಿ ಹಲವು ಬಿಜೆಪಿ ನಾಯಕರು ಗಾಂಧಿ ಕುಟುಂಬವನ್ನೇ ಟಾರ್ಗೆಟ್‌ ಮಾಡ್ತಿದ್ರು.. ಇದೀಗ, ಹೊಸ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಏರ್ಪಟ್ಟಿದ್ದು, ಗಾಂಧಿ ಕುಟುಂಬದ ಹೊರತಾಗಿ ಅಧ್ಯಕ್ಷರಾಗೋದು ಪಕ್ಕವಾಗಿದೆ.

ಸದ್ಯ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಂಗೇರಿದ್ದು, ನಿನ್ನೆಯಷ್ಟೇ ನಾಮಪತ್ರ ಸಂಗ್ರಹಿಸಿದ್ದ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೌದು.. ನಿನ್ನೆ ತಮ್ಮ ನಾಮಪತ್ರಗಳನ್ನು ಸಂಗ್ರಹಿಸಿದ್ದ ದಿಗ್ವಿಜಯ ಸಿಂಗ್ ಅವರು ಇಂದು ಬೆಳಗ್ಗೆ ಮತ್ತೋರ್ವ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ನಿನ್ನೆ ತಡರಾತ್ರಿ ನಡೆದ ಸಭೆಯ ನಂತರ, ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ.ವೇಣುಗೋಪಾಲ್ ಅವರು ಖರ್ಗೆ ಸ್ಪರ್ಧೆಯನ್ನು ಹೈಕಮಾಂಡ್ ಬಯಸುತ್ತದೆ ಎಂದು ತಿಳಿಸಿದ ಬೆನ್ನಲ್ಲೇ ದಿಗ್ವಿಜಯ್ ಸಿಂಗ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ನಾಮಪತ್ರ ಸಲ್ಲಿಕೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸಿದ್ದಾಂತದೊಂದಿಗೆ ನಾನು ಬಾಲ್ಯದಿಂದಲೂ ಬೆಸೆದುಕೊಂಡಿದ್ದೇನೆ. ಇಂದಿರಾಗಾಂಧಿಯೇ ನಮಗೆಲ್ಲಾ ಸ್ಪೂರ್ತಿ ಎಂದ್ರು.

ದಿಗ್ವಿಜಯ್ ಸಿಂಗ್ ಹಿಂದೆ ಸರಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ಕೇಳಿಬಂದ ಪ್ರಮುಖರ ಪಟ್ಟಿಯಲ್ಲಿ ಖರ್ಗೆ ಇದೀಗ ಅಗ್ರ ಗಣ್ಯರಾಗಿದ್ದು, ಸಿಂಗ್ ಹೊರಗುಳಿದ ಬಳಿಕ ಅವರ ಹಾದಿ ಸುಗಮವಾಗಿದೆ. ಈ ಹಿಂದೆ ಸಾಂಸ್ಥಿಕ ಬದಲಾವಣೆಗೆ ಒತ್ತಾಯಿಸಿ 2020 ರಲ್ಲಿ ಸೋನಿಯಾ ಗಾಂಧಿ ಅವರಿಗೆ ಸ್ಫೋಟಕ ಪತ್ರ ಬರೆದಿದ್ದ ಜಿ-23 ಭಿನ್ನಮತೀಯರ ಗುಂಪಿನ ಪ್ರಮುಖ ಸದಸ್ಯ ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರು ಕೂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸಿದ್ದಾರೆ.

ಖರ್ಗೆ ಅಧ್ಯಕ್ಷರಾದ್ರೆ ಏನು ಲಾಭ..?

ಮಲ್ಲಿಕಾರ್ಜುನ ಖರ್ಗೆ ಗಾಂಧಿ ಕುಟುಂಬದ ನಿಷ್ಠಾವಂತ
ದಕ್ಷಿಣ ಭಾರತದ ಪ್ರಬಲ ದಲಿತ ನಾಯಕ ಅನ್ನೋ ಟ್ರಂಪ್‌ ಕಾರ್ಡ್‌
ಹಿಂದಿ ಭಾಷೆಯ ಮೇಲೆ ಹಿಡಿತ ಹೊಂದಿರುವ ಖರ್ಗೆ
ಸಂಸದ, ಸಚಿವ, ವಿಪಕ್ಷ ನಾಯಕರಾಗಿ ಜವಾಬ್ದಾರಿ
ಮುಸ್ಲಿಂ, ದಲಿತ ಸಮುದಾಯಗಳ ಮತ ಸೆಳೆಯಲು ಖರ್ಗೆ ಅಸ್ತ್ರ
ಲೋಕಸಭೆಯಲ್ಲಿ ಮೋದಿ ವಿರುದ್ಧ ದಿಟ್ಟತನ ಪ್ರದರ್ಶನ

ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ.
20 ವರ್ಷಗಳ ನಂತರ ಗಾಂಧಿಯೇತರರು ಸ್ಪರ್ಧಿಸುತ್ತಿರುವ ಮೊದಲ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಇದಾಗಿದ್ದು, ಪಕ್ಷದ ಮುಖ್ಯಸ್ಥರಾಗಲು ಇತರ ಹಿರಿಯ ನಾಯಕರಿಗೆ ದಾರಿ ಮಾಡಿಕೊಡಲು ಗಾಂಧಿ ಕುಟುಂಬದ ನಾಯಕರು ಸ್ಪರ್ಧಿಸಲು ನಿರಾಕರಿಸಿದ್ದಾರೆ. ಖರ್ಗೆ AICC ಅಧ್ಯಕ್ಷರಾದರೆ ನಿಜಲಿಂಗಪ್ಪ ಬಳಿಕ ಆಯ್ಕೆಯಾದ ಎರಡನೇ ಕನ್ನಡಿಗ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

RELATED ARTICLES

Related Articles

TRENDING ARTICLES