ಉಕ್ರೇನ್ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ನಾಲ್ಕು ಪ್ರದೇಶಗಳನ್ನು ಇಂದು ರಷ್ಯಾಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುತ್ತಿದೆ.
ಉಕ್ರೇನ್‍ನ ಝಪೋರಿಝ ಮತ್ತು ಖೆರ್ಸನ್ ಪ್ರದೇಶಗಳ ಸ್ವಾಯತ್ತತೆಯನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಾನ್ಯ ಮಾಡಿದ್ದಾರೆ. ಈಗಾಗಲೇ ಲುಹಾನ್‍ಸ್ಕ ಮತ್ತು ಡೊನೆಸ್ಕ್ ಪ್ರದೇಶಗಳನ್ನು ಫೆಬ್ರವರಿಯಲ್ಲಿ ಹಾಗೂ ಅದಕ್ಕೂ ಮುನ್ನ ಕ್ರಿಮೆಯಾ ಪ್ರದೇಶದ ಸ್ವಾತಂತ್ರ್ಯಕ್ಕೆ ರಷ್ಯಾ ಮಾನ್ಯತೆ ನೀಡಿತ್ತು. ಈ ಸೇರ್ಪಡೆಯನ್ನು ಇಂದು ಅಧಿಕೃತಗೊಳಿಸುವ ಸಮಾರಂಭ ಅಯೋಜಿಸಲಾಗಿದೆ.
ಇನ್ನು, ದಕ್ಷಿಣ ಉಕ್ರೇನ್‍ನ ಝಪೋರಿಝ ಮತ್ತು ಖೆರ್ಸನ್ ಪ್ರದೇಶಗಳ ಸ್ವಾಯತ್ತತೆ ಮತ್ತು ಸಾರ್ವಭೌಮತ್ವವನ್ನು ಮಾನ್ಯ ಮಾಡಲಾಗುತ್ತಿದೆ ಎಂದು ಪುಟಿನ್ ಹೇಳಿದ್ದಾರೆ. ರಷ್ಯಾದ ಈ ನಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಖಂಡನೆಗೆ ಕಾರಣವಾಗುವ ನಿರೀಕ್ಷೆ ಇದೆ. ಈಗಾಗಲೇ ಈ ಆಕ್ರಮಿತ ಪ್ರದೇಶಗಳಲ್ಲಿ ತುರಾತುರಿಯಿಂದ ನಡೆಸಿದ ಜನಮತಗಣನೆಯಲ್ಲಿ ಶೇಕಡ 99ರಷ್ಟು ಮಂದಿ ರಷ್ಯಾಗೆ ಸೇರುವ ಇಂಗಿತ ವ್ಯಕ್ತಪಡಿಸಿದ ಬೆನ್ನಲ್ಲೇ ರಷ್ಯಾ ಈ ಕ್ರಮಕ್ಕೆ ಮುಂದಾಗಿದೆ. ಈ ಮತದಾನವನ್ನು ಉಕ್ರೇನ್ ಹಾಗೂ ಪಾಶ್ಚಿಮಾತ್ಯ ದೇಶಗಳು ಬೋಗಸ್ ಮತ್ತು ಕಾನೂನುಬಾಹಿರ ಎಂದು ಬಣ್ಣಿಸಿವೆ.