Monday, January 20, 2025

‘ಲಾಠಿ’ ಹಿಡಿದ ವಿಶಾಲ್ ಮನೆಗೇ ಕಲ್ಲು ಹೊಡೆದ ನೆಟ್ಟಿಗರು..!

ಚಿತ್ರರಂಗ ಅಂದ್ಮೇಲೆ ಕಾಂಪಿಟೇಷನ್ ಇರ್ಲೇಬೇಕು. ಆದ್ರೆ ತಮಿಳುನಾಡಿನಲ್ಲಿ ನಮ್ಮ ಕನ್ನಡ ಮೂಲದ ನಟ ವಿಶಾಲ್​ಗೆ ಪದೇ ಪದೆ ತೊಂದರೆ ಆಗ್ತಿದೆ. ಕಿಡಿಗೇಡಿಗಳು ಬೇಕು ಅಂತಲೇ ಅವ್ರ ಮೇಲೆ ಹರಿಹಾಯ್ತಿದ್ದಾರೆ. ಮತ್ತೊಮ್ಮೆ ಮನೆಗೆ ಕಲ್ಲು ತೂರಿದ್ದು, ವಿಷಯ ತಾರಕಕ್ಕೇರಿದೆ. ಇಷ್ಟಕ್ಕೂ ಏನಿದು ಪ್ರಕರಣ ಅಂತೀರಾ..? ಈ ಸ್ಟೋರಿ ಓದಿ.

  • ವಿಶಾಲ್ ಇಲ್ಲದ ಸಮಯದಲ್ಲಿ ಕಿಡಿಗೇಡಿಗಳಿಂದ ಅಟ್ಟಹಾಸ

ಯೆಸ್.. ನಟ ವಿಶಾಲ್ ಮೇಲೆ ಹೀಗೆ ಅಟ್ಯಾಕ್ ನಡೀತಿರೋದು ಇದೇ ಮೊದಲಲ್ಲ. ತಮಿಳು ಕಲಾವಿದರ ಸಂಘದ ಉಸ್ತುವಾರಿ ವಹಿಸಿಕೊಂಡ ವಿಶಾಲ್​ಗೆ ಸುಮಾರು ಐದಾರು ವರ್ಷಗಳಿಂದ ಈ ರೀತಿ ಪದೇ ಪದೆ ನಡೀತಿದೆ. ಉನ್ನತ ಸ್ಥಾನ ಅಲಂಕರಿಸಿ, ಒಳ್ಳೆಯ ಕಲಾವಿದ ಹಾಗೂ ನಿರ್ಮಾಪಕನಾಗಿ ಬೆಳೆದ ವಿಶಾಲ್​ನ ಕುಗ್ಗಿಸಲು ಹುನ್ನಾರ ನಡೀತಾನೇ ಇದೆ.

ಸದಾ ತಾನಾಯ್ತು, ತನ್ನ ಕೆಲಸ ಆಯ್ತು ಅಂತ ಇರ್ತಿದ್ದ ವಿಶಾಲ್, ಇದ್ದದ್ದನ್ನ ಇದ್ದಂಗೆ ನೇರವಾಗಿ ಹೇಳೋ ಸ್ಟ್ರೈಟ್ ಫಾರ್ವರ್ಡ್​ ವ್ಯಕ್ತಿತ್ವ ರೂಢಿಸಿಕೊಂಡಿದ್ದಾರೆ. ಅದು ಒಂದಷ್ಟು ಮಂದಿಗೆ ಸಹಿಸಲಾಗದೆ ಅವ್ರನ್ನ ಮೊಟಕುಗೊಳಿಸಲು ಮುಂದಾಗ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ವಿಶಾಲ್ ಕನ್ನಡದವ. ಕರ್ನಾಟಕ ಮೂಲದ ಜಿಕೆ ರೆಡ್ಡಿ ಅವ್ರ ಪುತ್ರ. ಹಾಗಾಗಿ ಇದು ಕನ್ನಡಿಗನ ಮೇಲಾಗ್ತಿರೋ ದೌರ್ಜನ್ಯ ಅಂದ್ರೂ ತಪ್ಪಾಗಲ್ಲ.

ಸದ್ಯ ವಿಶಾಲ್ ಲಾಠಿ ಅನ್ನೋ ಪ್ಯಾನ್ ಇಂಡಿಯಾ ಮೂವಿ ಮಾಡ್ತಿದ್ದಾರೆ. ತಮ್ಮದೇ ಬ್ಯಾನರ್​ನಲ್ಲಿ ನಿರ್ಮಿಸ್ತಿರೋ ಈ ಸಿನಿಮಾಗಾಗಿ ತನು, ಮನ, ದನವನ್ನು ಅರ್ಪಿಸಿ ಹಗಲಿರುಳು ದುಡಿಯುತ್ತಿದ್ದಾರೆ. ಈಗಲೂ ಶೂಟಿಂಗ್ ನಿಮಿತ್ತ ವಿದೇಶದಲ್ಲಿ ಬೀಡುಬಿಟ್ಟಿದ್ದಾರೆ. ಅವರಿಲ್ಲದ ಸಮಯದಲ್ಲಿ ಚೆನ್ನೈನ ಅಣ್ಣಾನಗರದಲ್ಲಿರೋ ಅವ್ರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕಿಟಕಿಯ ಗಾಜು ಹೊಡೆದು, ಕಲ್ಲು ಮನೆ ಹೊಕ್ಕಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವಿಶಾಲ್ ಅನುಪಸ್ಥಿತಿಯಲ್ಲಿ ಅವ್ರ ಮ್ಯಾನೇಜರ್ ಪೊಲೀಸ್ ಕಂಪ್ಲೆಂಟ್ ನೀಡಿದ್ದು, ಸಿಸಿ ಟಿವಿ ಫೋಟೇಜ್ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡು ದಿನದ ಹಿಂದೆ ನಡೆದ ಈ ಪ್ರಕರಣಕ್ಕೆ ಅಸಲಿ ಕಾರಣವೇನು..? ಯಾರು ಮಾಡಿದ್ರು..? ಏತಕ್ಕಾಗಿ ಮಾಡಿಸಿದ್ರು ಅನ್ನೋದು ಇನ್ವೆಸ್ಟಿಗೇಷನ್​ನಿಂದ ಗೊತ್ತಾಗಬೇಕಿದೆ. ಸದ್ಯ ವಿಶಾಲ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದು, ರೀಲ್​ನಲ್ಲಿ ಲಾಠಿ ಹಿಡಿದ ವಿಶಾಲ್, ರಿಯಲ್ ಲಾಠಿ ಹಿಡಿದವ್ರ ಮೊರೆ ಹೋಗುವಂತಾಗಿದೆ.

ಸಾಲು ಸಾಲು ಹಿಟ್ ಸಿನಿಮಾಗಳನ್ನ ನೀಡಿರೋ ವಿಶಾಲ್, ಚಿತ್ರರಂಗದ ಬೇರೆ ಬೇರೆ ಆಯಾಮಗಳಲ್ಲಿ ಗುರ್ತಿಸಿಕೊಂಡಿದ್ದಾರೆ. ಬಹಳ ದೊಡ್ಡ ಮಟ್ಟದ ಛಾಪು ಮೂಡಿಸಿದ್ದಾರೆ. ಅಲ್ಲದೆ, ಕನ್ನಡ, ತೆಲುಗು, ಮಲಯಾಳಂ ಇಂಡಸ್ಟ್ರಿಯ ಸ್ಟಾರ್ಸ್​ ಜೊತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅಪ್ಪು ಹಾಗೂ ಯಶ್​ರ ಆತ್ಮೀಯ ಗೆಳೆಯನಾಗಿದ್ದ ವಿಶಾಲ್, ರೀಸೆಂಟ್ ಆಗಿ ಮೈಸೂರಿನ ಶಕ್ತಿಧಾಮಕ್ಕೆ ಭೇಟಿ ನೀಡಿದ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES