ಕ್ಯೂಬಾದಲ್ಲಿ ರೌದ್ರಾವತಾರ ತೋರಿದ್ದ ಇಯಾನ್ ಚಂಡಮಾರುತ ಇದೀಗ ಅಮೆರಿಕಾದ ಫ್ಲೋರಿಡಾಗೆ ಕಾಲಿಟ್ಟಿದೆ. ನಿರೀಕ್ಷೆಗಿಂತ ಹೆಚ್ಚು ಅನಾಹುತಗಳನ್ನು ಸೃಷ್ಟಿಸುತ್ತಿರುವ ಇಯಾನ್ ಚಂಡಮಾರುತದ ಅಬ್ಬರಕ್ಕೆ ಜನರು ತತ್ತರಿಸಿಹೋಗಿದ್ದಾರೆ.
ಭಾರೀ ತೀವ್ರತೆಯ ಇಯಾನ್ ಚಂಡಮಾರುತ ಅಪ್ಪಳಿಸಿರುವುದರಿಂದ ಫ್ಲೋರಿಡಾದ ಆಡಳಿತ ಮಂಡಳಿ ತುರ್ತು ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಸ್ಥಳಗಳಿಂದ 25 ಲಕ್ಷಕ್ಕೂ ಹೆಚ್ಚು ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಸಂಜೆಯೇ ಫ್ಲೋರಿಡಾಗೆ ಇಯಾನ್ ಚಂಡಮಾರುತ ಅಪ್ಪಳಿಸಿದ್ದು, ಕರಾವಳಿ ನಗರವಾದ ನೇಪಲ್ಸ್ನಲ್ಲಿ ಭಾರೀ ಹಾನಿಯಾಗಿದೆ. ಕಾರುಗಳು, ರಸ್ತೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ.
ಇನ್ನು, ಅಪಾಯಕಾರಿ ಇಯಾನ್ ಚಂಡಮಾರುತದಿಂದ ಮನೆಗಳು ಕೊಚ್ಚಿಕೊಂಡು ಹೋಗಿವೆ. ಇಯಾನ್ ಚಂಡಮಾರುತದಿಂದ ಅಮೆರಿಕದಲ್ಲಿ ವಿಮಾನಗಳ ಹಾರಾಟವೂ ರದ್ದಾಗಿದೆ. ಸುಮಾರು 1,800 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ನೈಋತ್ಯ ಫ್ಲೋರಿಡಾಗೆ ಅಪ್ಪಳಿಸಿರುವ ಇಯಾನ್ ಚಂಡಮಾರುತದಿಂದ ಬೋಟ್ ಮುಳುಗಿ 20 ವಲಸಿಗರು ನಾಪತ್ತೆಯಾಗಿದ್ದಾರೆ. ಕರಾವಳಿ ನಗರವಾದ ನೇಪಲ್ಸ್‌ನಲ್ಲಿನ ಚಂಡಮಾರುತದ ಆಘಾತಕಾರಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.