Thursday, January 23, 2025

ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಯಿಂದ ಗೆಹ್ಲೋಟ್‌ ಔಟ್‌

ರಾಜಸ್ತಾನ : ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ಗಾಂಧಿ ಕುಟುಂಬ ಸ್ಪರ್ಧಿಸೋದಿಲ್ಲ. ಅಧ್ಯಕ್ಷ ಪಟ್ಟ ಬೇಡ ಎಂದು ಈಗಾಗಲೇ ರಾಹುಲ್‌ ಗಾಂಧಿ ಹೇಳಿದ್ದಾರೆ ಎಂದು ಹೇಳಿದ್ದ ಅಶೋಕ್‌ ಗೆಹ್ಲೋಟ್‌, ನಾನೇ ಅಧ್ಯಕ್ಷ ಸ್ಥಾನಕ್ಕೆ ಫಿಕ್ಸ್‌ ಎಂಬಂತೆ ಮಾತಾಡಿದ್ರು.. ಆದ್ರೆ, ರಾಜಸ್ಥಾನ ಸಿಎಂ ಲೆಕ್ಕಾಚಾರ ಇದೀಗ ಅವರಾಗಿಯೇ ಉಲ್ಟಾ ಮಾಡಿಕೊಂಡಿದ್ದಾರೆ. ಹೌದು, ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಗೆಹ್ಲೋಟ್ ಔಟ್ ಹಿಂದೆ ಸರಿದಿದ್ದಾರೆ.

ಹಾಗಾದ್ರೆ, ಇದನ್ನೇ ಬಯಸಿದ್ರಾ ರಾಜಸ್ಥಾನ ಸಿಎಂ..? ಹೌದು, ರೋಗಿ ಬಯಸಿದ್ದು ಹಾಲು, ವೈದ್ಯರು ಹೇಳಿದ್ದು ಹಾಲು ಅನ್ನ. ಈ ಗಾದೆ ಮಾತು ಸದ್ಯ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ಗೆ ಸೂಕ್ತವಾಗಿದೆ. ಕಾರಣ ಇಷ್ಟವಿಲ್ಲದೆ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಗೆ ರೇಸ್ನಲ್ಲಿ ಧುಮುಕಿದ ಅಶೋಕ್ ಗೆಹ್ಲೋಟ್ ಇದೀಗ ಚುನಾವಣೆ ರೇಸ್ನಿಂದ ಹೊರಬಿದ್ದಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರಾದರೆ ರಾಜಸ್ಥಾನ ಸಿಎಂ ಸ್ಥಾನ ತ್ಯಜಿಸಬೇಕಾಗುತ್ತದೆ. ಸಿಎಂ ಸ್ಥಾನ ತ್ಯಜಿಸಿದರೆ ತನ್ನ ವಿರೋಧಿ ಬಣ ಸಚಿನ್ ಪೈಲೆಟ್ ಪಾಲಾಗಲಿದೆ. ಇದು ಅಶೋಕ್ ಗೆಹ್ಲೋಟ್‌ಗೆ ಸುತಾರಾಂ ಇಷ್ಟವಿಲ್ಲ. ಇದಕ್ಕೂ ಮುಖ್ಯವಾಗಿ ಸಿಎಂ ಸ್ಥಾನ ಬಿಟ್ಟುಕೊಡಲು ಇಷ್ಟವಿರಲಿಲ್ಲ.

ಇದೇ ಕಾರಣಕ್ಕೆ ಗೆಹ್ಲೋಟ್ ಬಣದ 92 ಶಾಸಕರನ್ನು ರಾಜೀನಾಮೆ ನಾಟಕವಾಡಿಸಿದ ಗೆಹ್ಲೋಟ್ ಇದೀಗ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ತನ್ನ ಮೊದಲ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದಾರೆ. ಇನ್ನುಳಿದಿರುವುದು ತನ್ನು ಸಿಎಂ ಸ್ಥಾನವನ್ನು ಭದ್ರಗೊಳಿಸುವುದು. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳು ಈಗಾಗಲೇ ನಡೆದಿದೆ.

ರಾಜಸ್ಥಾನ ಕಾಂಗ್ರೆಸ್ನಲ್ಲಿ ಬಿರುಗಾಳಿ ಎಬ್ಬಿಸಿದ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಹೊರಬಿದ್ದ ಕಾರಣ ಇದೀಗ ಶಶಿ ತರೂರ್ ಮುಂದಿನ ಅಧ್ಯಕ್ಷರಾಗಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಶಶಿ ತರೂರ್ ಇದೇ ತಿಂಗಳ 30 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಇನ್ನು ಕಾಂಗ್ರೆಸ್ ಖಜಾಂಚಿ ಪವನ್ ಕುಮಾರ್ ಬನ್ಸಾಲ್ ಕೂಡ ಅಧ್ಯಕ್ಷೀಯ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ದಿಗ್ವಿಜಯ್ ಸಿಂಗ್ ಕೂಡ ಇದೀಗ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದು ಅಧ್ಯಕ್ಷ ಚುನಾವಣೆ ಮಾತಾದರೆ, ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ಇನ್ನೂ ನಿಂತಿಲ್ಲ.

ಕಾಂಗ್ರೆಸ್ನಲ್ಲಿ ಓರ್ವ ನಾಯಕನಿಗೆ ಒಂದು ಸ್ಥಾನ ಎಂದು ರಾಹುಲ್ ಗಾಂಧಿ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅಶೋಕ್ ಗೆಹ್ಲೋಟ್ ಅನಿವಾರ್ಯವಾಗಿ ರಾಜಸ್ಥಾನ ಸಿಎಂ ಸ್ಥಾನದಿಂದ ರಾಜೀನಾಮೆ ನೀಡಲು ಸಜ್ಜಾಗಿದ್ದರು. ಆದರೆ ಇದು ಕೇವಲ ನಾಟಕವಾಗಿತ್ತು. ಕಾರಣ ಭಾನುವಾರ ಸಂಜೆ ಅಶೋಕ್ ಗೆಹ್ಲೋಟ್ ಮನೆಯಲ್ಲಿ ಕಾಂಗ್ರೆಸ್ ಅಧಿಕೃತ ಸಭೆ ನಡೆಸಿತ್ತು. ಮಲ್ಲಿಕಾರ್ಜುನ್ ಖರ್ಗೆ, ಅಜಯ್ ಮಾಕೆನ್ ಸೇರಿದಂತೆ ಹಲವು ಕಾಂಗ್ರೆಸ್ ಹೈಕಮಾಂಡ್ ನಾಯಕರು ಈ ಸಭೆಯಲ್ಲಿ ಹಾಜರಿದ್ದರು. ಮುಖ್ಯವಾಗಿ ಮುಂದಿನ ಸಿಎಂ ಆಯ್ಕೆಗೆ ಈ ಸಭೆ ನಡೆಸಲಾಗಿತ್ತು. ಗೆಹ್ಲೋಟ್ ರಾಜೀನಾಮೆ ನೀಡಿದರೆ ಸಿಎಂ ಸ್ಥಾನ ನೇರವಾಗಿ ಸಚಿನ್ ಪೈಲೆಟ್ ಪಾಲಾಗಲಿದೆ ಅನ್ನೋದು ಬಹುತೇಕ ಸ್ಪಷ್ಟವಾಗಿತ್ತು.

ಗೆಹ್ಲೋಟ್ ಮನೆಗೆ ಅವರ ಬಣದ 30 ಶಾಸಕರು ಮಾತ್ರ ಹಾಜರಾಗಿದ್ದರು. ಇನ್ನುಳಿದ ಶಾಸಕರು, ನಾಯಕರು ಗೆಹ್ಲೋಟ್ ಆಪ್ತ ಶಾಂತಿ ಧರಿವಾಲ್ ಮನೆಯಲ್ಲಿನ ಬಂಡಾಯ ಸಭೆಗೆ ಹಾಜರಾಗಿದ್ದರು. ಬಳಿಕ ನೇರವಾಗಿ ಸ್ಪೀಕರ್ ಮನೆಗೆ ತೆರಳಿ, ಅಲ್ಲಿಂದಲೇ ಕಾಂಗ್ರೆಸ್ ಹೈಕಮಾಂಡ್‌ಗೆ ಎಚ್ಚರಿಕೆ ನೀಡಿದ್ದರು. ರಾಜಸ್ಥಾನ ಸಿಎಂ ಸ್ಥಾನಕ್ಕೆ ಸಚಿನ್ ಪೈಲೆಟ್ ಅಥವಾ ಪೈಲೆಟ್ ಬಣದ ನಾಯಕರನ್ನು ಆಯ್ಕೆ ಮಾಡಿದರೆ ರಾಜೀನಾಮೆ ನೀಡುವುದಾಗಿ 92 ಶಾಸಕರು ಬಂಡೆದಿದ್ದರು. ಅತೀ ದೊಡ್ಡ ರಾಜಕೀಯ ಹಿನ್ನಡೆ ಅರಿತ ಕಾಂಗ್ರೆಸ್ ತಕ್ಷಣವೇ ಅಶೋಕ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರೇಸ್‌ನಿಂದ ಹೊರಗಿಟ್ಟಿತು. ಇದು ಸಚಿನ್ ಪೈಲೆಟ್ ಬಣದ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಸಚಿನ್ ಪೈಲೆಟ್ ನೇರವಾಗಿ ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಜೊತೆ ಮಾತುಕತೆ ನಡೆಸಿದ್ದಾರೆ. ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಕುರಿತು ಹೈಕಮಾಂಡ್ ಒತ್ತಾಯಿಸುವ ಸಾಧ್ಯತೆ ಇದೆ.

RELATED ARTICLES

Related Articles

TRENDING ARTICLES