ಬೆಂಗಳೂರು: ಕೇಂದ್ರ ತನಿಖಾ ದಳದ(ಸಿಬಿಐ) ಅಧಿಕಾರಿಗಳು ಇಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಕನಕಪುರದ ದೊಡ್ಡಆಲಹಳ್ಳಿ, ಸಂತೆ ಕೋಡಿಹಳ್ಳಿ ಮನೆ ಹಾಗೂ ಜಮೀನು ಮತ್ತಿತರರ ಸ್ಥಳಗಳಲ್ಲಿ ದಾಖಲೆಗಳನ್ನ ಇಂದು ಪರಿಶೀಲನೆ ನಡೆಸಿದರು.
ಸಿಬಿಐ ಅಧಿಕಾರಿಗಳು, ಕನಕಪುರ ತಹಶೀಲ್ದಾರ್ ಸೇರಿ ಡಿಕೆ ಶಿವಕುಮಾರ್ ಕನಕಪುರದ ಮನೆಯಲ್ಲಿ ಇಂದು ಆಸ್ತಿ-ಪಾಸ್ತಿ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಈಗ ತಾನೆ ನನ್ನ ಮನೆಯಿಂದ ಕರೆ ಬಂದಿತ್ತು. ನಮ್ಮ ಮನೆ, ತೋಟದ ಮನೆ ಜಮೀನು ಬಳಿ ಸಿಬಿಐ ಅಧಿಕಾರಿಗಳು ಬಂದಿದ್ದರಂತೆ, ಸಿಬಿಐ ಅಧಿಕಾರಿಗಳು ತಹಶಿಲ್ದಾರರನ್ನ ಕರೆದುಕೊಂಡು ಬಂದಿದ್ದಾರೆ. ಮೊದಲೆ ಈ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಕೊಟ್ಟಿದ್ದೀನಿ ಎಂದರು.
ಸಿಬಿಐ ಅಧಿಕಾರಿಗಳಿಗೆ ನನ್ನ ಮೇಲೆ ಜಾಸ್ತಿ ಪ್ರೀತಿ ಅನ್ಕೊತ್ತೀನಿ, ಮನೆಯಲ್ಲಿ ಸಿಪಿಡಬ್ಲೂಡಿ ಅಧಿಕಾರಿಗಳ ತಂಡದಿಂದ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಕನಕಪುರ ಮನೆ, ತೋಟದ ಮನೆ, ಎಲ್ಲಾ ಆಸ್ತಿಗಳನ್ನ ಪರಿಶೀಲನೆ ಮಾಡಿ ವಾಪಸ್ ಹೋಗಿದ್ದಾರೆ. ಇಷ್ಟು ಮಾತ್ರ ನನಗೆ ಗೊತ್ತು. ಕೇಂದ್ರ ನಮ್ಮನ್ನ ಬಹಳ ಪ್ರೀತಿ ನಡೆಸಿಕೊಳ್ಳುತ್ತಿದೆ ಎಂದು ಡಿಕೆಶಿ ಹೇಳಿದರು.