ಶಿವಮೊಗ್ಗ; ಶಾಂತಿ ಭಂಗ, ಕಾನೊನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಪಿಎಫ್ ಐ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧ ಮಾಡಿ ಆದೇಶಿಸಿದೆ. ಸುಮಾರು ವರ್ಷಗಳಿಂದ ರಾಷ್ಟ್ರದಲ್ಲಿ ಭಯೋತ್ಪಾದಕ ಕೆಲಸಗಳನ್ನು ಎಸಗುತ್ತಿದ್ದವು ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಹೇಳಿದ್ದಾರೆ.
ಇಂದು ಕೇಂದ್ರ ಸರ್ಕಾರ ಪಿಎಫ್ ಐ ನಿಷೇಧ ವಿಚಾರವಾಗಿ ಮಾತನಾಡಿ ಬಿಎಸ್ವೈ, ಪಿಎಫ್ಐ ಸಂಘಟನೆ ದೇಶಕ್ಕೆ ಮಾರಕವಾಗಿತ್ತು. ಈ ಸಂಘಟನೆ ನಿಷೇಧ ಮಾಡುವಂತೆ ಬಹುದಿನಗಳಿಂದ ಬೇಡಿಕೆ ಇತ್ತು. ಸತತ ಹೋರಾಟದಿಂದ ಈಗ ಸಂಘಟನೆ ನಿಷೇಧ ಮಾಡಲಾಗಿದೆ. ಅದರ ಫಲವಾಗಿ ಇಂದು ಜಯ ಸಿಕ್ಕಿದೆ ಎಂದರು.
ಪಿಎಪ್ಐ ಸಂಘಟನೆಯನ್ನ ಬಹಳ ಹಿಂದೆಯೇ ನಿಷೇಧ ಮಾಡಬೇಕಿತ್ತು. ಈಗಲಾದರೂ ಈ ತೀರ್ಮಾನ ತೆಗೆದುಕೊಂಡಿರುವುದು ಸ್ವಾಗತಾರ್ಹವಾಗಿದೆ.
ಸಿದ್ದರಾಮಯ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ಸಿದ್ದರಾಮಯ್ಯ ಅವರು ಯಾವಾಗಲೂ ತಲೆ ತಿರುಕ ಮಾತನಾಡೋದು ಸ್ವಾಭಾವಿಕ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎಂಬ ಕಲ್ಪನೆ ಇಲ್ಲದೇ ಮಾತನಾಡುತ್ತಾರೆ. ಇಡೀ ದೇಶದಲ್ಲಿ ಹಿಂದುಗಳ ಸಂಘಟನೆ ಮಾಡ್ತಿರುವ, ಪ್ರಾಮಾಣಿಕವಾಗಿ ಆರ್ಎಸ್ಎಸ್ ಕೆಲಸ ಮಾಡುತ್ತಿದೆ.
ಸಿದ್ದರಾಮಯ್ಯ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡುವಾಗ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು. ದೇಶದಲ್ಲಿ ಆರ್ಎಸ್ಎಸ್ ಬಗ್ಗೆ ನೂರಕ್ಕೆ ನೂರರಷ್ಟು ಜನ ಅಭಿಮಾನ ಹೊಂದಿದ್ದಾರೆ. ಅಂತಹ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡೋದು ಸಿದ್ದರಾಮಯ್ಯ ಯೋಗ್ಯತೆ ಬಗ್ಗೆ ತಿಳಿಸುತ್ತದೆ. ಅವರು ಏನೇ ಮಾತನಾಡಿದ್ರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಈ ರೀತಿ ಹಗುರವಾಗಿ ಮಾತನಾಡಿ ಅವರ ಗೌರವ ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದು ಟೀಕಿಸಿದರು.
ಪಿಎಫ್ಐ ನಿಂದ ಏನೇನು ಅನಾಹುತ ಆಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿಯಾಗಿದೆ. ಏನೇನು ಅನಾಹುತ ಆಗಿ ನಮ್ಮ ಕಾರ್ಯಕರ್ತರ ಕೊಲೆ ಆಗಿರುವುದು ಗೊತ್ತಿರುವ ಸಂಗತಿ, ಕಾನೂನು ರೀತಿ ಏನೇನು ಕ್ರಮ ಕೈಗೊಳ್ಳಬಹುದೋ ಎಲ್ಲವನ್ನು ತೆಗೆದುಕೊಳ್ಳುತ್ತಿದ್ದೇವೆ. ಮುಂದೆಯೂ ಕ್ರಮ ಕೈಗೊಳ್ಳುತ್ತೇವೆ. ಸರಿಯಾದ ಪಾಠ ಕಲಿಸುತ್ತೇವೆ. ಈ ಸಂಘಟನೆಗಳು ಬೇರೆ ಯಾವುದೇ ರೀತಿಯಲ್ಲಿ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದ್ರೂ ತಲೆ ಎತ್ತುವ ಪ್ರಯತ್ನ ಮಾಡಿದ್ರೆ ಅದಕ್ಕೆ ತಕ್ಕಶಾಸ್ತಿಯನ್ನು ಪ್ರಧಾನಿ, ಗೃಹ ಸಚಿವರು ಕೈಗೊಳ್ಳುತ್ತಾರೆ ಎಂದು ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು.