ಬೆಂಗಳೂರು : ಪೊಲೀಸರು ಅದೆಷ್ಟೇ ಆರೋಪಿಗಳನ್ನು ಬಂಧಿಸಿದರೂ ಮಾದಕ ಜಾಲದ ಹಾವಳಿ ಮಾತ್ರ ಕಡಿಮೆಯಾಗಿಲ್ಲ. ನೆರೆಯ ಆಂಧ್ರದಿಂದ ಬೆಂಗಳೂರಿನ ದಂಧೆಕೋರರ ಕೈ ಸೇರ್ತಿರುವ ವಿವಿಧ ಮಾದರಿಯ ಸಿಂಥೆಟಿಕ್ ಡ್ರಗ್ ಮೂಲ ಹುಡುಕಿ ಹೊರಟ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳ ಆಂಧ್ರಪ್ರದೇಶ ಮೂಲದ ನಾಲ್ವರು ಖತರ್ನಾಕ್ ಮಹಿಳಾಮಣಿಗಳನ್ನು ಬಂಧಿಸಿದೆ. ಯಸ್, ಇವರೇ ಆರೋಪಿಗಳು ಪುಷ್ಪಾ, ವಿಜಯಾ, ಪೊರನಮ್ಮ ಹಾಗೂ ದೇವಿ.
ಆಂಧ್ರದ ಸಿಂತಪಲ್ಲಿಯ ಅರಣ್ಯ ಪ್ರದೇಶಗಳಿಂದ ವಿವಿಧ ಮಾದಕ ಪದಾರ್ಥಗಳಗಳನ್ನು ಪಡೆಯುತ್ತಿದ್ದ ಈ ಆರೋಪಿತ ಮಹಿಳೆಯರು, ರೈಲ್ವೇ ಅಧಿಕಾರಿಗಳ ಕಣ್ತಪ್ಪಿಸಲು ಮದುವೆ ಸಮಾರಂಭಗಳಿಗೆ ಹೊರಟವರಂತೆ ಥಳುಕು ಬಳುಕಿನಿಂದ ರೆಡಿಯಾಗಿ ಮಾದಕ ಪದಾರ್ಥಗಳನ್ನು ಪಾತ್ರೆ ಸಾಮಾನುಗಳಲ್ಲಿ ಅಕ್ಕಿಯ ನಡುವೆ ಅಡಗಿಸಿಟ್ಟುಕೊಂಡು ರೈಲನ್ನೇರ್ತಿದ್ರು. ಬಳಿಕ ನಿಗದಿಯಾದ ರೈಲ್ವೇ ಸ್ಟೇಷನ್‌ನಲ್ಲಿ ಇಳಿದು ಬೆಂಗಳೂರು ಮೂಲದ ವ್ಯಕ್ತಿಗಳಿಗೆ ಮಾಲ್ ಡಿಲಿವರಿ ಮಾಡಿ ವಾಪಸಾಗುತ್ತಿದ್ದರು.
ಇತ್ತೀಚೆಗೆ ಮಾದಕ ವಸ್ತು ಸರಬರಾಜಿನಲ್ಲಿ ಸಕ್ರಿಯನಾಗಿದ್ದ ವಿದೇಶಿ ಮೂಲದ ಡಿ.ಜೆ.ಯೊಬ್ಬನನ್ನು ವಿವೇಕನಗರ ಠಾಣಾ ಪೊಲೀಸರು ಬಂಧಿಸಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಆರೋಪಿಗೆ ಮಾದಕ ಸರಬರಾಜು ಮಾಡುತ್ತಿದ್ದವರ ಮೂಲ ಹುಡುಕಿ ಹೊರಟ ಸಿಸಿಬಿ ಪೊಲೀಸರು ಪ್ರಶಾಂತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದು ಪುಟ್ಟಪರ್ತಿ ಬಳಿ ಬೆಂಗಳೂರು ಮೂಲದ ಪೆಡ್ಲರ್ಸ್‌ಗಳಿಗೆ ಗಾಂಜಾ ಪೂರೈಸುವ ಕೆಲಸ ಮಾಡುತ್ತಿದ್ದ ನಾಲ್ವರು ಮಹಿಳೆಯರನ್ನು ಮಾಲಿನ ಸಮೇತ ಬಂಧಿಸಿದ್ದಾರೆ.ಬಂಧಿತರ ಬಳಿಯಿದ್ದ ಬರೋಬ್ಬರಿ 7ಕೋಟಿ 80 ಲಕ್ಷ ಮೌಲ್ಯದ 1 ಕೆ.ಜಿ 4 ಗ್ರಾಂ ಎಂಡಿಎಂಎ, 8 ಕೆ.ಜಿ ಹ್ಯಾಶ್ ಆಯಿಲ್, 10 ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇನ್ನು ಇಡೀ ಜಾಲವನ್ನು ಸಿಂತಪಲ್ಲಿಯ ಅರಣ್ಯ ಪ್ರದೇಶದಲ್ಲಿ ಕುಳಿತು ನೋಡಿಕೊಳ್ತಿದ್ದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಸಿಸಿಬಿ ಕಾರ್ಯಾಚರಣೆ ಮುಂದುವರೆದಿದೆ. ಮಾದಕ ಜಾಲದ ಬುಡಕ್ಕೆ ಸಿಸಿಬಿ ಪೊಲೀಸರು ಕೈ ಇಟ್ಟಿದ್ದು, ಯಾವ ಮಾರ್ಗದಿಂದ ಬೆಂಗಳೂರಿಗೆ ಡ್ರಗ್ಸ್ ಎಂಟ್ರಿಯಾದ್ರೂ ಸುಮ್ಮನಿರಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಅಶ್ವಥ್ ಎಸ್.ಎನ್.ಕ್ರೈಂ ಬ್ಯೂರೋ ಪವರ್ ಟಿವಿ