ಮೈಸೂರು; ಆತ ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿ, ಆದರೆ ಮಾಡಿರೋದು ಮಾತ್ರ ಕಿತಾಪತಿ ಕೆಲಸ. ಕುಲಪತಿ ವಿರುದ್ಧ ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ಅರೋಪ ಕೇಳಿ ಬಂದಿದ್ದು, ಆರೋಪ ಮಾಡುವವರ ಮೇಲೆ ಹಲ್ಲೆಗೆ ಯತ್ನಿಸಿ ಹೈಡ್ರಾಮ ನಡೆಸಲಾಗಿದೆ.
ಶಿಕ್ಷಣದಿಂದ ವಂಚಿತರಾದವರಿಗೆ ದೂರ ಶಿಕ್ಷಣ ನೀಡುವ ಸಲುವಾಗಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವನ್ನ ಸ್ಥಾಪನೆ ಮಾಡಲಾಗಿದೆ. ಆದರೆ ಮುಕ್ತ ವಿಶ್ವವಿದ್ಯಾಲಯ ಶಿಕ್ಷಣಕ್ಕಿಂತ ಹೆಚ್ಚಾಗಿ ಹಗರಣಗಳಲ್ಲೇ ಸದ್ದು ಮಾಡಿದೆ. ಇದೀಗ ಮುಕ್ತ ವಿವಿಯ ಕುಲಪತಿಗಳ ವಿರುದ್ದವೇ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ.
ಮೈಸೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಡಾ.ಕೆ.ಮಹದೇವ್ ಅವರು ಕುಲಪತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಇಂದು ದಾಖಲೆಗಳನ್ನ ಬಿಡುಗಡೆ ಮಾಡಲು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಡಾ.ಕೆ ಮಹದೇವ್ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ಮಂಡ್ಯದ ರೀಜಿನಲ್ ಡೈರೆಕ್ಟರ್ ಸುಧಾಕರ್ ಹೊಸಳ್ಳಿ ಎಂಬುವವರು ಹಲ್ಲೆಗೆ ಯತ್ನಿಸಿದ್ದು ಈ ಕುರಿತು ದೂರು ದಾಖಲಾಗಿದೆ.
ಮಹಿಳಾ ಸಿಬ್ಬಂದಿಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ. ರಾತ್ರಿಪೂರ್ತಿ ಕರೆ ಮಾಡಿ ಕಿರುಕುಳ ನೀಡ್ತಿದ್ದಾರೆ. ಮೊಬೈಲ್‌ಗೆ ರೀಚಾರ್ಜ್ ಮಾಡಿಸಿ, ಹಣ ನೀಡಿ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇದೆಲ್ಲವೂ ಆಕೆಯ ಗಂಡನಿಗೆ ಗೊತ್ತಾಗಿದೆ. ಮಹಿಳೆಯ ಗಂಡ ಮತ್ತು ಕುಲಪತಿ ಮಾತನಾಡಿರುವ ಆಡಿಯೋವನ್ನು ನಾನು ಬಿಡುಗಡೆ ಮಾಡಿದ್ದೇನೆ. ಇದನ್ನು ತಡೆಯುವ ಉದ್ದೇಶದಿಂದ ಕೆಎಸ್‌ಒಯು ಮಂಡ್ಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ್ ಹೊಸಳ್ಳಿ ಸೇರಿ ಮತ್ತಿಬ್ಬರು ಪ್ರಯತ್ನ ಮಾಡಿದ್ದಾರೆ ಎಂದು ಮೈಸೂರಿನ ಕೆ.ಆರ್.ಠಾಣೆಯಲ್ಲಿ ಕೆ.ಮಹದೇವ್ ದೂರು ನೀಡಿದ್ದಾರೆ.
ಇನ್ನೂ ಹಲ್ಲೆಗೆ ಯತ್ನಿಸಿರೋ ಡಾ.ಸುಧಾಕರ್ ಹೊಸಳ್ಳಿ ದಾವಣಗೆರೆಯ ರೀಜನಲ್ ಸೆಂಟರ್‌ನಲ್ಲಿದ್ದಾಗಲೇ ಸಸ್ಪೆಂಡ್ ಆಗಿದ್ದ. ಅವನನ್ನ ಡಾ. ವಿದ್ಯಾಶಂಕರ್ ಮಂಡ್ಯಕ್ಕೆ ವರ್ಗಾವಣೆ ಮಾಡಿದ್ದಾನೆ. ಹಾಗಾಗಿ ವಿದ್ಯಾಶಂಕರ್ ಕುಮ್ಮಕ್ಕಿನಿಂದ ಸುಧಾಕರ್ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಮುಕ್ತ ವಿಶ್ವವಿದ್ಯಾಲಯ ಚನ್ನಾಗಿ ನಡೆಯುತ್ತಿದೆ. ಆದರೆ ಅದನ್ನು ನಡೆಸುವ ಕುಲಪತಿ ಸರಿ ಇಲ್ಲ. ಅವನ ವವಿರುದ್ಧದ ಹೋರಾಟವೂ ನಿಲ್ಲುವುದಿಲ್ಲ ಎಂದು ಡಾ.ಕೆ.ಮಹದೇವ್ ತಿಳಿಸಿದರು.
ಹಿಂದೆ ಇದೇ ಮುಕ್ತ ವಿವಿಯಲ್ಲಿ ನಡೆದ ಮಾಸ್ಕ್ ಕಾರ್ಡ್ ಹಗರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಕುಲಪತಿಗಳ ವಿರುದ್ಧವೇ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿರೋದು ಮುಕ್ತ ವಿವಿಗೆ ಮತ್ತೊಂದು ಕಪ್ಪು ಚುಕ್ಕೆಯಾಗಿದೆ.
ಸುರೇಶ್ ಬಿ, ಪವರ್ ಟಿವಿ. ಮೈಸೂರು