Wednesday, January 22, 2025

ರಿಷಬ್ ಶೆಟ್ರ ಕಾಂತಾರ ಮೇಕಿಂಗ್ ನೋಡಿದ್ರೆ ಬೆಚ್ಚಿ ಬೀಳ್ತೀರಿ

ಕಾಂತಾರ. ಇದು ಬರೀ ಕಥೆ ಅಲ್ಲ. ಯಾರೂ ಅರಿಯದ ದಂತಕಥೆ. ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ, ಕರಾವಳಿಯ ಮಣ್ಣಿನ ಸೊಗಡನ್ನ ಬಿತ್ತರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಕಾಡು ಮೇಡಿನಲ್ಲಿ, ಹಗಲಿರುಳು ಸೆರೆಯಾದ ಸಿನಿಮಾದ ಮೇಕಿಂಗ್ ರೋಚಕತೆಯನ್ನ ನೀವೊಮ್ಮೆ ನೋಡಿಬಿಡಿ.

  • ಕ್ಯಾಮೆರಾ & ಆರ್ಟ್​ ವರ್ಕ್​ ಹಿಂದಿನ ಅಸಲಿಯತ್ತು ರಿವೀಲ್
  • ಕೊಲ್ಲೂರು, ಕೆರಾಡಿಯ ದಟ್ಟ ಕಾಡಲ್ಲಿ ಧರಣಿ ಕಟ್ಟಿದ ಊರು
  • ಮಳೆಯಲ್ಲಿ ಮೂರು ಬಾರಿ ಸೆಟ್ ವರ್ಕ್​.. ಮೇಕಿಂಗ್ ಕ್ರಾಂತಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯುತ್ತಿದೆ ಅಂದ್ರೆ ಅದ್ರ ಹಿಂದೆ ನೂರಾರು ತಂತ್ರಜ್ಞರ ಹಾಗೂ ಕಲಾವಿದರ ಕನಸಿದೆ, ಬದುಕಿದೆ. ಹೌದು.. ಕಾಂತಾರ ಚಿತ್ರ ಕೂಡ ಅಂತಹ ಪ್ರಯೋಗಗಳ ಸಾಲಿನಲ್ಲಿ ನಿಲ್ಲೋ ಮೋಸ್ಟ್ ಎಕ್ಸ್​ಪೆಕ್ಟೆಡ್ ಮೂವಿ. ಕೆಜಿಎಫ್​ನಂತಹ ಅದ್ಭುತ ಸಿನಿಮಾ ನೀಡಿದ ಹೊಂಬಾಳೆ ಫಿಲಂಸ್​ನಿಂದ ಬರ್ತಿರೋ ಚಿತ್ರ ಇದಾಗಿದ್ದು, ಇಲ್ಲಿಯೂ ಹತ್ತು ಹಲವು ವಿಶೇಷತೆಗಳು ಎದ್ದು ಕಾಣಲಿವೆ.

ರಿಷಬ್ ಶೆಟ್ಟಿ ಬರೆದು, ನಟಿಸಿ, ನಿರ್ದೇಶಿಸಿರೋ ಸಿನಿಮಾ ಕಾಂತಾರ. ಅದರಲ್ಲೂ ಅವರದ್ದೇ ಮಣ್ಣಿನ ಸೊಗಡಿನ ಕಥೆಯನ್ನ ಬಹಳ ಸೊಗಸಾಗಿ ಹೇಳಲು ಹೊರಟಿದ್ದಾರೆ. ಕರಾವಳಿಯ ಪ್ರಕೃತಿ ಸೊಬಗು, ಅಲ್ಲಿನ ಆಚಾರ, ವಿಚಾರಗಳು, ನಂಬಿಕೆಗಳ ಮೇಲೆ ಈ ಕಥೆ ನಿಲ್ಲಲಿದೆ. ಅಲ್ಲದೆ, ಅದಕ್ಕೆ ಅಡ್ಡಿಯಾಗೋ ಫಾರೆಸ್ಟ್ ಇಲಾಖೆ ಕುರಿತ ರೋಚಕತೆ ಆಗಿದೆ.

ವಿಭಿನ್ನ ಕಥೆಗೆ ತಕ್ಕನಾಗಿ ಪಾತ್ರಗಳೂ ಸಹ ಅಷ್ಟೇ ವೆರೈಟಿ ಆಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಈ ಸಿನಿಮಾ ಮೇಕಿಂಗ್ ವಿಚಾರದಲ್ಲಿ ಹೊಸ ಕ್ರಾಂತಿಯನ್ನೇ ಮಾಡಲು ಹೊರಟಂತಿದೆ. ಕಾರಣ ರೆಡ್ ಱಪರ್ ಅನ್ನೋ ವಿನೂತನ ಕ್ಯಾಮೆರಾನ ಇದೇ ಮೊದಲ ಬಾರಿ ಕನ್ನಡ ಸಿನಿಮಾಗಾಗಿ ತರೆಸಿದೆ. ಹಗಲಿರುಳು ಅನ್ನದೆ, ಮಳೆ, ಗಾಳಿ, ಚಳಿ ಅನ್ನದೆ ಕಲ್ಪನೆಗಳಿಗೆಲ್ಲಾ ಮೂರ್ತ ರೂಪ ನೀಡಿದೆ ಟೀಂ.

ಅದ್ರಲ್ಲೂ ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ ಟೀಂ ಹಾಗೂ ಧರಣಿ ಅವ್ರ ಆರ್ಟ್​ ಟೀಂಗಳು ಈ ಚಿತ್ರದ ಪ್ರಮುಖ ಪಿಲ್ಲರ್​ಗಳಾಗಿ ನಿಂತಿವೆ. ಕರಾವಳಿಯ ಧಾರಾಕಾರ ಮಳೆಯಲ್ಲಿ ಎರಡ್ಮೂರು ಬಾರಿ ಸೆಟ್​ಗಳನ್ನ ನಿರ್ಮಿಸಿ, ಕಷ್ಟ ಪಟ್ಟು ಅಂದುಕೊಂಡದ್ದನ್ನ ಅಂದುಕೊಂಡಂತೆ ಸೆರೆ ಹಿಡಿದಿವೆ. ಕೊಲ್ಲೂರು, ಕೆರಾಡಿ, ಬೈಂದೂರಿನ ದಟ್ಟ ಕಾಡಿನಲ್ಲಿ ಲೈಟಿಂಗ್ ಮಾಡಿಕೊಂಡು ಚಿತ್ರಿಸಿರೋ ಪರಿ ಮೇಕಿಂಗ್​ನಲ್ಲಿ ಬಹಿರಂಗವಾಗಿದೆ.

ಭೂತ ಕೋಲ, ಕೆಸರು ಗದ್ದೆಯಲ್ಲಿನ ಕಂಬಳ ಸೇರಿದಂತೆ ಹತ್ತಾರು ಕರಾವಳಿ ಆಚಾರಗಳು ಇಲ್ಲಿ ಅನಾವರಣಗೊಳ್ಳಲಿವೆ. ಇದು ಬರೀ ಸಿನಿಮಾ ಆಗಿರದೆ, ಅಲ್ಲಿನ ನೇಟಿವಿಟಿಯ ಕೈಗನ್ನಡಿಯಾಗಿ ಹೊರಹೊಮ್ಮಲಿದೆ. ಅಲ್ಲಿನ ಸಂಸ್ಕೃತಿಯನ್ನ ನ್ಯಾಷನಲ್, ಇಂಟರ್​ನ್ಯಾಷನಲ್ ಲೆವೆಲ್​ನಲ್ಲಿ ಬಿಂಬಿಸೋ ನಿಟ್ಟಿನಲ್ಲಿ ರಿಷಬ್ ನಿರೀಕ್ಷೆಗೂ ಮೀರಿ ಎಫರ್ಟ್​ ಹಾಕಿದ್ದಾರೆ.

ಕಾಂತಾರ ಇದೇ ಸೆಪ್ಟೆಂಬರ್ 30ಕ್ಕೆ ವರ್ಲ್ಡ್​ವೈಡ್ ಬಿಗ್ ಸ್ಕ್ರೀನ್ ಮೇಲೆ ಮೂಡಲಿದ್ದು, ಕೆಜಿಎಫ್ ರೀತಿ ಮೇಕಿಂಗ್ ಜೊತೆ ಕಂಟೆಂಟ್​ನಿಂದಲೂ ಸದ್ದು ಮಾಡಲಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಜೊತೆ ರಿಷಬ್ ಕರಿಯರ್​ಗೆ ಈ ಸಿನಿಮಾ ಎಷ್ಟು ಮಹತ್ವದ್ದು ಆಗಲಿದೆ ಅನ್ನೋದನ್ನ ನಿರೀಕ್ಷಿಸಬೇಕಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES