ಹಾವೇರಿ : ನಿರಂತರವಾಗಿ ಸುರಿದ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಹಾವೇರಿ ರೈತರ ಆಕ್ರೋಶದ ಕಟ್ಟೆ ಇಂದು ಒಡೆದಿತ್ತು. ಬೆಳೆ ಪರಿಹಾರ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ ರೈತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟ ಕಾಲಾವಧಿಯವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ವರುಣನ ಆರ್ಭಟಕ್ಕೆ ಹಾವೇರಿ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಬೆಳೆದ ಬಹುತೇಕ ಬೆಳೆ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಬೆಳೆ ಹಾನಿ ಪರಿಹಾರ ಹಾಗೂ ಬೆಳೆವಿಮೆ ಪಾವತಿ ಮಾಡುವಂತೆ ಸಾಕಷ್ಟು ಸಲ ರೈತರು ಹೋರಾಟ ಮಾಡಿ ಮನವಿ ಸಲ್ಲಿಸಿದ್ರು ರೈತರಿಗೆ ಸರಿಯಾದ ಪರಿಹಾರ ಸಿಕ್ಕಿಲ್ಲ. ಇದರಿಂದ ಬೆಸತ್ತಿರುವ ಹಾವೇರಿ ಜಿಲ್ಲೆಯ ರೈತರು ಇಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ರು. ಜಿಲ್ಲೆಯ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ರು. ನಗರದ ಕಾಗಿನೆಲೆ ವೃತ್ತದಿಂದ ಆರಂಭವಾಗಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದ ರೈತರು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಬಳಿಕ ದೇವಗಿರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಇಂದಿನಿಂದ ಅನಿರ್ಧಿಷ್ಟ ಕಾಲಾವಧಿವರೆಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ. ಬೆಳೆ ಹಾನಿ ಪರಿಹಾರ ನೀಡಬೇಕು, ಕಳೆದ ಐದಾರು ವರ್ಷಗಳಿಂದ ನೀಡದ ಬೆಳೆವಿಮೆ ಪರಿಹಾರ ನೀಡಬೇಕು, ಜಿಲ್ಲೆಯನ್ನ ಹಸಿ ಬರಗಾಲವೆಂದು ಘೋಷಣೆ ಮಾಡಿ ಎಕರೆಗೆ 30 ಸಾವಿರ ಪರಿಹಾರ ನೀಡಬೇಕು, ರೈತರ ಕೃಷಿ ಸಾಲ ಮನ್ನಾ ಮಾಡುವುದು, ವಿದ್ಯುತ್ ಖಾಸಗೀಕರಣ ವಿರೋದಿಸಿ ರೈತರು ಹೋರಾಟ ಆರಂಭಿಸಿದ್ದಾರೆ.
ಸಿಎಂ ಹಾಗೂ ಕೃಷಿ ಸಚಿವರ ತವರು ಜಿಲ್ಲೆಯಲ್ಲಿ ರೈತರು ಹೋರಾಟದ ಕಹಳೆ ಮೊಳಗಿಸಿದ್ದು, ಬೆಳೆ ಪರಿಹಾರ ಹಾಗೂ ವಿವಿಧ ಬೇಡಿಕೆ ಈಡೇರಿಸಲು ಪಟ್ಟು ಹಿಡಿದು ಹೋರಾಟ ಆರಂಭಿಸಿದ್ದಾರೆ.
ವೀರೇಶ ಬಾರ್ಕಿ ಪವರ್ ಟಿವಿ ಹಾವೇರಿ.