ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣ ಬಗೆದಷ್ಟು ಬಯಲಾಗಿದೆ. ಈ ವಂಚನೆ ಪ್ರಕರಣದಲ್ಲಿ ಈಗಾಗಲೇ ಆಸ್ತಿ ಮುಟ್ಟಗೋಲು ಹಾಕಿ ಹೂಡಿಕೆದಾರರ ಹಣವನ್ನು ವಾಪಸ್ಸು ಕೊಡುವ ಪ್ರಕ್ರಿಯೆ ನಡೆಯುತ್ತಿದೆ. ಹೈಕೋರ್ಟ್ ಆದೇಶದಂತೆ ಮೊನ್ನೆ ಶಿವಾಜಿನಗರದ ನೆಹರೂ ಸ್ಕೂಲ್ ಆಸ್ತಿಯೂ ಕೂಡ ಸೀಜ್ ಆಗಿ ನೋಟೀಸ್ ಅಂಟಿಸಲಾಗಿದೆ. ಇದರ ಅರಿವು ಇಲ್ಲದೆ ಮಕ್ಕಳನ್ನ ಶಾಲೆಗೆ ಕರೆದುಕೊಂಡು ಬಂದ ಪೋಷಕರಿಗೆ ಶಾಲೆ ಸೀಜ್ ಆಗಿದ್ದು, ನೋಡಿ ಫುಲ್ ಶಾಕ್ ಆಗಿದ್ದಾರೆ.
ಐಎಂಎ ಬಹುಕೋಟಿ ಹಗರಣದ ಎಫೆಕ್ಟ್ ಈಗ ಶಿವಾಜಿನಗರ ಭಾರತಿನಗರ ವಾರ್ಡ್ ನಲ್ಲಿರೋ ನೆಹರೂ ಪ್ರೌಢಶಾಲಾಗೂ ತಟ್ಟಿದೆ. ಹೈಕೋರ್ಟ್ ಆದೇಶದಂತೆ ನೆಹರೂ ಸ್ಕೂಲ್ ಆಸ್ತಿಯೂ ಕೂಡ ಸೀಜ್ ಆಗಿ ಶಾಲೆ ಮುಂಭಾಗ ನೋಟೀಸ್ ಅಂಟಿಸಲಾಗಿದೆ. ಇದರಿಂದ ಮಕ್ಕಳ ಓದಿಗೆ ತೊಂದರೆ ಆಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ಶುರುಮಾಡಿದ್ದಾರೆ.
ಐಎಂಎ ಸಂಸ್ಥೆ ನೆಹರೂ ಶಾಲೆಯನ್ನ ದತ್ತು ಪಡೆದು ಅದನ್ನು ನಡೆಸುತ್ತಿತ್ತು. ಆದ್ರೆ ಐಎಂಎ ಪ್ರಕರಣ ಸಂಬಂಧ ಅಧಿಕಾರಿಗಳು ಈಗ ಶಾಲೆಯನ್ನ ಸೀಜ್, ಅಂತಾ ನೋಟಿಸ್ ಹಾಕಿದ್ದಾರೆ. ಇದರಿಂದ ಶಾಲೆ ಮಕ್ಕಳಿಗೆ ಓದಿನಲ್ಲಿ ಸಮಸ್ಯೆ ಎದುರಾಗಿದೆ. ಶಾಲೆಯಲ್ಲಿ 450ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದ್ರೆ ಈಗ ಏಕಾಏಕಿ ಶಾಲೆಗೆ ಬೀಗ ಹಾಕಿದ್ದಾರೆ. ಇದನ್ನು ಖಂಡಿಸಿ ನೂರಾರು ಶಾಲಾ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆಗೆ ಇಳಿದಿದ್ದಾರೆ.
ನಮ್ಮ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಿ. ಪಕ್ಕದ ಸರ್ಕಾರಿ ಶಾಲೆಗೆ ಆದ್ರೂ ದಾಖಲಾತಿ ಮಾಡಿಸಿ ಸಾಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಈಗ ಏಕಾಏಕಿ ಶಾಲೆ ಬಂದ್ ಮಾಡಿದ್ರೆ ನಮ್ಮ ಮಕ್ಕಳ ಶಿಕ್ಷಣ ಸ್ಥಿತಿ ಏನು. ಪರ್ಯಾಯ ವ್ಯವಸ್ಥೆ ಮಾಡಿ ಶಾಲೆ ಸೀಜ್ ಮಾಡಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿಯೂ ಆದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ ಶಾಲೆ ತೆರೆದಿದ್ದರು. ಎಲ್ಕೆಜಿಯಿಂದ 10ನೇ ತರಗತಿಯವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದರು. ವಂಚನೆ ಪ್ರಕರಣದಲ್ಲಿ ಕಂಪನಿಯ ಎಲ್ಲ ಆಸ್ತಿಗಳನ್ನು ಸಕ್ಷಮ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದು, ಇದೀಗ ಶಾಲೆಯನ್ನೂ ಸುಪರ್ದಿಗೆ ಪಡೆಯುವುದಕ್ಕಾಗಿ ನೋಟಿಸ್ ಜಾರಿ ಮಾಡಿದೆ.
ಸೇಂಟ್ ಜಾನ್ಸ್ ಚರ್ಚ್ ರಸ್ತೆಯಲ್ಲಿರುವ ಶಾಲೆ ಜಾಗವನ್ನು ಶಾಂತಿಯುತವಾಗಿ ನಮ್ಮ ಸುಪರ್ದಿಗೆ ನೀಡಿ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ನೋಟಿಸ್ ಪಡೆದಿರುವ ಆಡಳಿತ ಮಂಡಳಿ, ಶಾಲೆಯನ್ನು ಬಂದ್ ಮಾಡಲುತೀರ್ಮಾನಿಸಿರುವರಿಂದ ಪೋಷಕರು ಆತಂಕಗೊಂಡಿದ್ದಾರೆ. ಇಂದು ಸಭೆ ಮಾಡುತ್ತೇವೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿತ್ತು. ಆದ್ರೆ ಸಭೆ ಮಾಡಿಲ್ಲ ಅಂತ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.