ಧಾರವಾಡ; ಶೈಕ್ಷಣಿಕ ಕಾಶಿ ಧಾರವಾಡ ಇಂದು ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಯಿತು. ದೇಶದ ಅತ್ಯುನ್ನತ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಉದ್ಘಾಟಿಸಿದರು.
ಇದಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹುಬ್ಬಳ್ಳಿಯಲ್ಲಿ ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ನೀಡಿ ಗೌರವಿಸಲಾಯಿತು. ಪೌರ ಕಾರ್ಮಿಕರ ಸನ್ಮಾನ ಸ್ವೀಕರಿಸಿ ನೇರವಾಗಿ ಐಐಐಟಿ ಕಟ್ಟಡ ಉದ್ಘಾಟನೆಗೆ ಬಂದ ಮುರ್ಮು ಅವರಿಗೆ ಸಂಸ್ಥೆಯ ಉಸ್ತುವಾರಿ ಅಧ್ಯಕ್ಷೆ ಸುಧಾಮೂರ್ತಿ ಆತ್ಮೀಯವಾಗಿದೆ ಬರಮಾಡಿಕೊಂಡರು.
ರಾಷ್ಟ್ರಪತಿಯವರಿಗೆ ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಗೋದಿ ಹುಗ್ಗಿ, ರೊಟ್ಟಿ ಚಟ್ನಿ, ಎನಗಾಯಿ ಪಲ್ಲೆ, ಶೇಂಗಾ ಚಟ್ನಿ ಊಟ ಬಡಿಸಲಾಯಿತು. ನಂತರ ಸಭಾ ವೇದಿಕೆಗೆ ಬಂದ ಮುರ್ಮು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯನ್ನು ದೇಶಕ್ಕೆ ಸಮರ್ಪಿಸಿದರು. ವಿಶ್ವದ ನಕಾಶೆಯಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದ್ದು, ವಿಜ್ಞಾನಿಗಳು, ದೇಶದ ಕೀರ್ತಿಯನ್ನು ಮುಗಿಲೆತ್ತರದಲ್ಲಿ ಮಿಂಚುವಂತೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಇದೆ ವೇಳೆ ರಾಷ್ಟ್ರಪತಿಗಳಿಗೆ ಸಂಸ್ಥೆಯ ಉಸ್ತುವಾರಿ ಅಧ್ಯಕ್ಷೆ ಸುಧಾಮೂರ್ತಿ ಮೂರು ಸಾವಿರ ಹೊಲಿಗೆಗಳುಳ್ಳ ಕೌದಿಯನ್ನು ಮುರ್ಮು ಅವರಿಗೆ ನೀಡಿದರು. ಜೊತೆಗೆ ಒಂದು ರೇಷ್ಮೆ ಸೀರೆಯನ್ನು ಉಡುಗೊರೆಯಾಗಿ ನೀಡಿದರು.
ಐಐಟಿ ಸಂಸ್ಥೆಗೆ ರಾಜ್ಯ ಸರ್ಕಾರ 60 ಎಕರೆ ಭೂಮಿಯನ್ನು ನೀಡಿದ್ದರ ಪರಿಣಾಮ ಆಕರ್ಷಕ ಕಟ್ಟಡ 270 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐತಿಹಾಸಿಕ ಕಟ್ಟಡವನ್ನು ದೇಶಕ್ಕೆ ಸಮರ್ಪಿಸಿದ ರಾಷ್ಟ್ರಪತಿಯವರಿಗೆ ಅಭಿನಂದನೆ ಸಲ್ಲಿಸಿದರು. ರಾಜ್ಯ ಸರ್ಕಾರ ಉನ್ನತ ಶಿಕ್ಷಣಕ್ಕೆ ಎಲ್ಲ ಹಂತದಲ್ಲಿ ಸಹಕಾರ ನೀಡುವದಾಗಿ ತಿಳಿಸಿದರು.
ರಾಷ್ಟ್ರಪತಿಗಳ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ ಭದ್ರತೆ ಮಾಡಲಾಗಿತ್ತು. ರಾಷ್ಟ್ರಪತಿಗಳು ಸಂಚರಿಸುವ ಮಾರ್ಗದಲ್ಲಿ ರಸ್ತೆ ಸಂಪರ್ಕ ಬಂದ ಮಾಡಲಾಗಿತ್ತು. ವಿಶೇಷ ಎಂದರೆ ಐಐಐಟಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರನ್ನು ಸಮಾರಂಭಕ್ಕೆ ಆಹ್ವಾನಿಸಿ ಗೌರವಿಸಲಾಯಿತು.