ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಅಂತಹವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಈ ರೀತಿ ಮಾಡುವಂತಹದ್ದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜ್ಯ ಕಾಂಗ್ರೆಸ್‌ನ ಪೇ ಸಿಎಂ ಅಭಿಯಾನ ವಿಚಾರವಾಗಿ ಕಿಡಿಕಾರಿದ್ದಾರೆ.
ಇಂದು ಜಿಲ್ಲೆಯ ಬೇಲೂರಿನಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸಿ, ಕಮೀಷನ್ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಅವಕಾಶವಿದೆ. ಸುಮ್ಮನೆ 40% ಅಂತ ಆರೋಪ ಮಾಡೋದು ಸರಿಯಲ್ಲ. ನಮ್ಮ ರಾಜ್ಯ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಗೊಂದಲ ಉಂಟುಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬರುತ್ತದೆ ಹೊರತು, ಬಸವರಾಜ ಬೊಮ್ಮಯಿ ಅಥವಾ ಬೇರೆಯವರ ಗೌರವಕ್ಕೆ ಧಕ್ಕೆ ಬರುವುದಿಲ್ಲ.
ಇನ್ನಾದರೂ ಈ ರೀತಿಯ ನಿಮ್ಮ ಅತಿರೇಕದ ವರ್ತನೆ ಏನಿದೆ. ಜನ ಛೀಮಾರಿ ಹಾಕುವ ಮುಂಚೆ ಪೇ ಸಿಎಂ ತರ ಕೆಲಸ ಬಿಡಬೇಕೆಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡರಿಗೆ ಯಡಿಯೂರಪ್ಪ ಅವರು ಒತ್ತಾಯ ಮಾಡಿದರು.
ದೇಶದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಇವತ್ತು, ಪಕ್ಷ ಧೂಳಿಪಟವಾಗಿದೆ. ಕರ್ನಾಟಕದಲ್ಲಿ ಸ್ವಲ್ಪ ಉಸಿರಾಡುತ್ತಿದೆ. ಈ ರೀತಿಯ ವರ್ತನೆಯಿಂದ ಅದನ್ನು ಅವರು ಕಳೆದುಕೊಳ್ಳುತ್ತಾರೆ ಅಂತ ನನಗೆ ಅನ್ನಿಸುತ್ತಿದೆ.
ಮೊದಲು ಗೌರವ ನಡೆದುಕೊಳ್ಳುವುದನ್ನು ಕಾಂಗ್ರೆಸ್ ಮುಖಂಡರು ಕಲಿಯಬೇಕು. ನಿಮ್ಮ ಅತಿರೇಕದ ಈ ವರ್ತನೆಗೆ ನಮಗು ಅದೇ ಭಾಷೆಯಲ್ಲಿ ಉತ್ತರ ಕೊಡಲು ಬರುತ್ತದೆ. ಆದರೆ, ನಾವು ಆ ಕೆಳಮಟ್ಟಕ್ಕೆ ಇಳಿಯಲು ಸಿದ್ದವಿಲ್ಲ. ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ಸಹಿಸದೆ ಈ ರೀತಿಯ ಅಪಪ್ರಚಾರ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಬಿಎಸ್ ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು.