Thursday, January 23, 2025

ರೈತರ ನಿದ್ದೆಗೆಡಿಸಿದ ಮಂಗಗಳ ಹಿಂಡು

ತೋಟಗಳಿಗೆ ನುಗ್ಗಿ ಫಲ ಮುಕ್ಕುತ್ತಿದ್ದ ಮಂಗಗಳೀಗ ಗದ್ದೆಗೆ ನುಗ್ಗಲು ಆರಂಭಿಸಿವೆ. ಭತ್ತ ಟಿಸಿಲೊಡೆಯುವ ಈ ಹೊತ್ತಲ್ಲಿ ಹಿಂಡು ಹಿಂಡಾಗಿ ಗದ್ದೆಗೆ ನುಗ್ಗಿ ಫಸಲಿಗೆ ಕೊಕ್ಕೆ ಹಾಕುತ್ತಿರುವುದರಿಂದ ರೈತಾಪಿ ವರ್ಗ ಕಂಗೆಟ್ಟಿದೆ.

ಮಲೆನಾಡಿನ ತಪ್ಪಲು ಪ್ರದೇಶಗಳಲ್ಲಿ ಗದ್ದೆಗಿಳಿಯುತ್ತಿರುವ ಮಂಗಗಳನ್ನು ಓಡಿಸುವುದೇ ಕೃಷಿಕರಿಗೆ ಕಾಯಕವಾಗಿ ಬಿಟ್ಟಿದೆ. ವಿಪರೀತ ಮಳೆಯ ಕಾರಣಕ್ಕೆ ಈ ಬಾರಿ ಮುಂಗಾರು ಕೃಷಿ ವಿಳಂಬವಾಗಿ ಆರಂಭಗೊಂಡಿತ್ತು. ಇದೀಗ ಸಸಿಗಳಲ್ಲಿ ಭತ್ತ ಟಿಸಿಲೊಡೆಯುತ್ತಿದೆ. ರಾತ್ರಿ ಹಗಲೆನ್ನದೆ ಮಂಗಗಳ ಹಿಂಡು ಗದ್ದೆಗೆ ನುಗ್ಗಿ ಬೆಳೆಯುತ್ತಿರುವ ಭತ್ತದ ಕಣಜವನ್ನು ಮುಕ್ಕುತ್ತಿವೆ. ಆರ್ಡಿ, ಅಲ್ಬಾಡಿ, ಮಡಾಮಕ್ಕಿ, ಶೇಡಿಮನೆ, ಅಂಪಾರು ಗ್ರಾಮದ ತೆಂಕಬೆಟ್ಟು, ಕೊಡ್ಲಾಡಿ, ಬೆಳ್ಳಾಲ, ಮಾವಿನಗುಳಿ, ಹಳ್ಳಿಹೊಳೆ, ಕಮಲಶಿಲೆ, ಆಜ್ರಿ, ಶಂಕರನಾರಾಯಣ, ಮುಂತಾದೆಡೆ ಮಂಗಗಳ ಕಾಟಕ್ಕೆ ನಲುಗಿದ ರೈತರಿಗೆ ಹೊಲ ಕಾಯುವುದೇ ಸಾಹಸ ಎಂಬಂತಾಗಿದೆ.

ಇನ್ನು, ಮಡಾಮಕ್ಕಿ ಗ್ರಾಮದಿಂದ ಮೊದಲ್ಗೊಂಡು ಸಿದ್ಧಾಪುರವರೆಗಿನ ಪಶ್ಚಿಮಘಟ್ಟದ ತಪ್ಪಲು ಪ್ರದೇಶಗಳಲ್ಲಿ ಮಂಗಗಳ ಕಾಟ ವಿಪರೀತ ಎನಿಸಿದೆ. ತೋಟಗಳಿಗೆ ನುಗ್ಗಿ ಹಾವಳಿ ನೀಡುತ್ತಿದ್ದ ವಾನರ ಹಿಂಡು ಅರಣ್ಯದಂಚಿನ ಕೃಷಿಗದ್ದೆಗೆ ನುಗ್ಗಿ ಭತ್ತದ ಫಲ ಮೇಯುತ್ತಿವೆ. ಈಗಾಗಲೆ ಅಡಕೆ, ಬಾಳೆ, ತೆಂಗಿನ ಕೃಷಿಗೆ ಮಂಗಗಳು ಉಂಟುಪಡಿಸುತ್ತಿರುವ ಹಾನಿಯಿಂದಾಗಿ ಕಂಗೆಟ್ಟಿದ್ದ ರೈತರಿಗೆ ಭತ್ತ ಉಳಿಸಿಕೊಳ್ಳಲು ಮಂಗಗಳೊಂದಿಗೆ ಹೆಣಗಾಡುವ ಪ್ರಮೇಯ ಎದುರಾಗಿದೆ.

RELATED ARTICLES

Related Articles

TRENDING ARTICLES