ಬಾಗಲಕೋಟೆ : ನಿರಂತರವಾಗಿ ಮಳೆ ಸುರಿದ ಪರಿಣಾಮ ಚಿಮ್ಮನಕಟ್ಟಿ ಗ್ರಾಮಕ್ಕೆ ಗುಡ್ಡದಿಂದ ಹರಿದು ಬಂದ ನೀರು ಏಕಾಏಕಿ ಮನೆಗಳಿಗೆ ನುಗ್ಗಿತ್ತು. ಅತ್ತ ಕಾಲುವೆ ಇದ್ದರೂ ಸಹ ಚಿಕ್ಕದಾಗಿದ್ದು, ಮಳೆಯ ನೀರು ಹೆಚ್ಚಾದ ಹಿನ್ನೆಲೆ, ಶಾಲೆ ಸೇರಿ ಬಹುತೇಕ ಮನೆಗಳು ಜಲಾವೃತವಾಗಿದ್ದವು. ಮಳೆಯಿಂದ ಬಂದ ನೀರು ಅಲ್ಲಲ್ಲಿ ನಿಂತು ಹಸಿರಾಗಿ ಪಾಚಿಗಟ್ಟಿ ನಿಂತಿದ್ದು, ಇದ್ರಿಂದ ಗ್ರಾಮದಲ್ಲೀಗ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ಪ್ರತಿ ಬಾರಿ ಚುನಾವಣೆ ಅಂತ ಬಂದಾಗ ಬರುವ ಜನಪ್ರತಿನಿಧಿಗಳು ಮಳೆ ಬಂದಾಗ ನಮ್ಮ ಗೋಳು ಕೇಳೋರಿಲ್ಲ ಎನ್ನುತ್ತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇತ್ತೀಚೆಗಷ್ಟೇ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಬಂದು ಗ್ರಾಮದ ಬಹುತೇಕ ಜನರು ಅನಾರೋಗ್ಯಕ್ಕೀಡಾಗಿ ಪಕ್ಕದ ಊರಿಗೆ ಹೋಗಿ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದರು. ಆದ್ರೆ, ಇದೀಗ ಮತ್ತೆ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ. ರಸ್ತೆಗಳೆಲ್ಲಾ ಕೆಸರುಮಯವಾಗಿದ್ದು, ಎಷ್ಟೋ ಜನ ಕೈಕಾಲು ಮುರಿದುಕೊಂಡಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಎಚ್ಚೆತ್ತು ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳ ಜೊತೆಗೆ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು ಅಂತಾರೆ ಗ್ರಾಮಸ್ಥರು.
ಒಟ್ಟಿನಲ್ಲಿ ಚಿಮ್ಮನಕಟ್ಟಿ ಗ್ರಾಮದಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ಸಾಂಕ್ರಾಮಿಕ ರೋಗದ ಭೀತಿ ಜೊತೆಗೆ ಮೂಲಭೂತ ಸೌಲಭ್ಯಗಳ ಕೊರತೆ ಎದುರಾಗಿದ್ದು, ಇದಕ್ಕೆ ಸಂಭಂದಿಸಿ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳಲು ಮುಂದಾಗ್ತಾರೆ ಅಂತ ಕಾದು ನೋಡಬೇಕಿದೆ.
ನಿಜಗುಣ ಮಠಪತಿ,ಪವರ್ ಟಿವಿ ಬಾಗಲಕೋಟೆ