ಹಾಸನ : ಅತಿಯಾದ ಮಳೆಗೆ ಮನೆ ಕಳೆದುಕೊಂಡು ಲಾರಿಯಲ್ಲಿ ಬಡ ಕುಟುಂಬ ಆಶ್ರಯ ಪಡೆದಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಚನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಳೆದ 40 ವರ್ಷಗಳಿಂದ ಇದೇ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಆದರೆ ಅಗಸ್ಟ್ ತಿಂಗಳಲ್ಲಿ ಸುರಿದ ಮಳೆಗೆ ಮನೆ ಗೋಡೆ ಕುಸಿದು ಬಿದ್ದಿದ್ದು, ಲಾರಿ ಮಾಲೀಕರ ಅನುಮತಿ ಪಡೆದು ರಾತ್ರಿವೇಳೆ ಪುಟ್ಟ ಪುಟ್ಟ ಮಕ್ಕಳ ಜೊತೆ ಲಾರಿಯಲ್ಲಿ ಟಾರ್ಪಲ್ ಹಾಕಿ ಕೊಂಡು ಬದುಕು ಸಾಗಿಸುತ್ತಿದ್ದಾರೆ. ಇದ್ದ ಒಂದು ಮನೆ ಕೂಡ ಮಳೆರಾಯ ಕಿತ್ತುಕೊಂಡ ನಂತರ ವಿಧಿ ಇಲ್ಲದೆ ಇಡೀ ಕುಟುಂಬವೇ ಲಾರಿಯಲ್ಲಿ ಆಶ್ರಯ ಪಡೆಯುವಂತಾಗಿದೆ.
ಸುರಿದ ಧಾರಾಕಾರ ಮಳೆಗೆ ಆಲೂರು ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ಸಲೀಂ ಎಂಬವರ ಮನೆ ಕುಸಿದುಬಿದ್ದ ಬೀದಿಯಲ್ಲಿ ನಿಲ್ಲುವಂತಾಗಿದೆ. ಮನೆಯ ಎಲ್ಲಾ ದಾಖಲೆ ಪತ್ರಗಳಿದ್ದರೂ ಮನೆ ಹೆದ್ದಾರಿ ಪಕ್ಕದಲ್ಲಿದೆ ಎಂಬ ಕಾರಣಕ್ಕೆ ಅಧಿಕಾರಿಗಳು ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ. ಇತ್ತ ಮಡದಿ ಮತ್ತು ಸಣ್ಣಪುಟ್ಟ ಮಕ್ಕಳನ್ನು ಹೊಂದಿರುವ ಸಲೀಂ ಸಂಸಾರಕ್ಕೆ ಆಶ್ರಯ ನೀಡಲು ಲಾರಿಗೆ ಟಾರ್ಪಲ್ ಹಾಕಿಕೊಂಡು ನೆಲೆಸಿದ್ದಾರೆ. ಇದೀಗ ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡುತ್ತಿದೆ.