ಕಾಂಗ್ರೆಸ್ ಪಕ್ಷ ದೇಶಾದ್ಯಂತ ತನ್ನ ಅಸ್ತಿತ್ವ ಕಳೆದುಕೊಳ್ತಿದೆ ಅನ್ನೋ ಮಾತು ಜೋರಾಗ್ತನೆ ಇದೆ. ಈಗಾಗಲೇ ಹಿರಿಯ ನಾಯಕರು ಬಂಡೆದ್ದು ಪಕ್ಷ ಬಿಟ್ಟು ಹೋಗಿದ್ದಾರೆ. ಹೀಗಾಗಿ, ಪ್ರಬಲ ಪಕ್ಷವಾಗಿ ಮತ್ತೆ ಅಖಾಡಕ್ಕೆ ಇಳಿಯಬೇಕಿದೆ ಕೈ ಪಡೆ. ಭಾರತ್ ಜೋಡೋ ಪಾದಯಾತ್ರೆ ಮೂಲಕ ದಕ್ಷಿಣದಿಂದ ಹಿಡಿದು ಉತ್ತರದ ವರೆಗೂ ಜನರಿಗೆ ಸಂದೇಶ ಸಾರುವ ಒಂದು ಪಾದಯಾತ್ರೆಯಾಗಿದೆ. ಈ ಮೂಲಕ, ಪಕ್ಷಕ್ಕೆ ಟಾನಿಕ್ ನೀಡುವ ಎಐಸಿಸಿ ಪ್ರಯತ್ನ ಫಲಕೊಡುತ್ತಾ..? ಇಲ್ವೋ ಗೊತ್ತಿಲ್ಲ. ಆದ್ರೆ, ಮುಂಬರುವ ಚುನಾವಣೆಗಳು ಕಾಂಗ್ರೆಸ್‌ಗೆ ದೊಡ್ಡ ಸವಾಲುಗಳಾಗಿವೆ. ಈ ಮಧ್ಯೆ, ಯಾರಾಗ್ತಾರಾ ಕಾಂಗ್ರೆಸ್ ಅಧ್ಯಕ್ಷರು ಅನ್ನೋ ವಿಚಾರ ತುಂಬಾ ಚರ್ಚೆಯಾಗ್ತಿದೆ.
ಈ ಮಧ್ಯೆ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿಯವರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್. ಗಾಂಧಿ ಕುಟುಂಬದಿಂದ ಯಾರೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬಾರದೆಂದು ಸ್ವತಃ ರಾಹುಲ್ ಗಾಂಧಿಯವರೇ ಸ್ಪಷ್ಟಪಡಿಸಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಖಚಿತಪಡಿಸಿದ ಅವರು ರಾಜಸ್ಥಾನದ ಮುಖ್ಯಮಂತ್ರಿಯಾಗಿ ಯಾರನ್ನು ಬದಲಿಸಬೇಕು ಎಂಬುದರ ಕುರಿತು ಯಾವುದೇ ನಿರ್ಧಾರವನ್ನು ಸೋನಿಯಾ ಗಾಂಧಿ ನಿರ್ಧರಿಸುತ್ತಾರೆ ಎಂದು ಸಹ ತಿಳಿಸಿದ್ದಾರೆ.
ಅಶೋಕ್ ಗೆಹ್ಲೋಟ್, ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ಶಶಿ ತರೂರ್ ಹೆಸರುಗಳು ಕೇಳಿ ಬರ್ತಿವೆ. ಆದ್ರೆ, ಇದ್ರ ಮಧ್ಯೆ, ಲಾಬಿಗಳು ನಡೆದಿವೆ. ಈ ಮಧ್ಯೆ, ಅಶೋಕ್ ಗೆಹ್ಲೋಟ್ ನಡೆ ನೋಡಿದ್ರೆ, ಇವರೇ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿ ವ್ಯಕ್ತಿ ಎನ್ನಲಾಗ್ತಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ತಮ್ಮ ರಾಜ್ಯವಾದ ಕೇರಳದಿಂದ ಬೆಂಬಲ ಸಿಗುತ್ತಿಲ್ಲ. ರಾಹುಲ್ ಗಾಂಧಿಯೇ ಮತ್ತೆ ಅಧ್ಯಕ್ಷರಾಗಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಇದೆಲ್ಲದ್ರ ಮಧ್ಯೆ, ರಾಹುಲ್ ಗಾಂಧಿ ಬಿಟ್ರೆ ಮತ್ಯಾರೋ ಅನ್ನೋ ಪ್ರಶ್ನೆಗೆ ಗೆಹ್ಲೋಟ್ ಉತ್ತರವಾಗಿ ಕಾಣ್ತಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಘೋಷಿತ ವೇಳಾಪಟ್ಟಿಯ ಪ್ರಕಾರ, ಅಧಿಸೂಚನೆ ಹೊರಡಿಸಿದ ನಂತರ, ಈಗ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಸೆಪ್ಟೆಂಬರ್ 24 ರಿಂದ 30 ರವರೆಗೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 8 ಕೊನೆಯ ದಿನವಾಗಿದೆ. ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದಲ್ಲಿ ಅಕ್ಟೋಬರ್ 17 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 19 ರಂದು ಫಲಿತಾಂಶ ಪ್ರಕಟವಾಗಲಿದೆ. ಬುಧವಾರ, ಅಧಿಸೂಚನೆ ಹೊರಡಿಸುವ ಒಂದು ದಿನ ಮೊದಲು, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮತ್ತು ಪಕ್ಷದ ಹಿರಿಯ ನಾಯಕ ಶಶಿ ತರೂರ್ ಚುನಾವಣಾ ಕಣಕ್ಕೆ ಇಳಿಯುವ ಸ್ಪಷ್ಟ ಸಂಕೇತ ನೀಡಿದ ಬಳಿಕ 22 ವರ್ಷಗಳ ನಂತರ ದೇಶದ ಅತ್ಯಂತ ಹಳೆಯ ಪಕ್ಷದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವುದು ಖಚಿತವಾಗಿದೆ.