Monday, December 23, 2024

ಶಂಕಿತ ಉಗ್ರರ ಜಾಡು ಬೆನ್ನತ್ತಿದ Dysp ನೇತೃತ್ವದ 2 ಟೀಮ್..!

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು. ಕೋಮು ಸಂಘರ್ಷದಿಂದಾಗಿ ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿತ್ತು. ಇದೀಗ ಶಂಕಿತ ಭಯೋತ್ಪಾದಕರ ಜಾಡು ಪತ್ತೆಯಾಗಿರೋದು ಶಿವಮೊಗ್ಗ ಜನತೆಯ ಆತಂಕ ಮತ್ತಷ್ಟು ಹೆಚ್ಚಾಗಿದೆ. ಬಂಧಿತ ಶಂಕಿತ ಉಗ್ರರ ವಿಚಾರಣೆ ನಡೆಸ್ತಿರೋ ಪೊಲೀಸರು, ಶಿವಮೊಗ್ಗ, ಮಂಗಳೂರು ಸೇರಿದಂತೆ ಒಟ್ಟು 11 ಕಡೆ ಶೋಧ ಕಾರ್ಯ ನಡೆಸಿದ್ದಾರೆ. ತನಿಖೆಯಲ್ಲಿ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಯ್ಯದ್ ಯಾಸೀನ್ ಮತ್ತು ಮಾಜ್ ಮುನೀರ್ ಅಹ್ಮದ್​ನನ್ನ 7 ದಿನಗಳ ಕಾಲ ಕಸ್ಟಡಿಗೆ ಪಡೆದಿರುವ ಪೊಲೀಸರಿಂದ ತನಿಖೆ ತೀವ್ರಗೊಳಿಸಿದ್ದಾರೆ. ಇನ್ನು, ಸ್ಥಳ ಮಹಜರಿಗಾಗಿ ಮಂಗಳೂರಿಗೆ ಕರೆದೊಯ್ದಿದ್ದ ಮಾಜ್​ನನ್ನು ಶಿವಮೊಗ್ಗಕ್ಕೆ ವಾಪಸ್ ಕರೆತರಲಾಗಿದೆ.

ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಶಾರೀಕ್​ಗಾಗಿ ತೀವ್ರ ಶೋಧ ಕಾರ್ಯ ನಡೆದಿದೆ. ಶಾರೀಕ್ ಶೋಧ ಕಾರ್ಯಾಚರಣೆಗಾಗಿ ಡಿವಾಯ್​​ಎಸ್​ಪಿ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡ ರಚಿಸಿ ಕೇರಳ ಸೇರಿ ಇತರೆಡೆ ಶಂಕಿತ ಉಗ್ರನ ಸೆರೆಗೆ ಬಲೆ ಬೀಸಲಾಗಿದೆ. ಇವೆಲ್ಲವೂ ಕೂಡ ಖುದ್ದು ಎಸ್.ಪಿ ಲಕ್ಷ್ಮಿಪ್ರಸಾದ್ ನಿಂತು ಲೀಡ್ ಮಾಡುತ್ತಿರುವುದು ಗಮನಾರ್ಹವಾಗಿದೆ.

ಈ ನಡುವೆ ಮಂಗಳೂರಿಂದ ಶಿವಮೊಗ್ಗಕ್ಕೆ ಆಗಮಿಸಿದ ಕೇಂದ್ರೀಯ ಸೈಬರ್ ತಂಡ, ಯಾಸೀನ್ ಮೊಬೈಲ್ ರಿಟ್ರೀವ್ ಮಾಡುತ್ತಿದೆ. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಆಮ್ಟೆ ಉಪಸ್ಥಿತಿಯಲ್ಲಿ ಮೊಬೈಲ್ ಡಾಟಾ ರಿಕವರಿ ಮಾಡಲಾಗುತ್ತಿದೆ. ಅಬ್ಬಲಗೆರೆ ಗ್ರಾಮದ ಪೊದೆಯಲ್ಲಿ ಎಸೆದಿದ್ದ ಯಾಸೀನ್ ಮೊಬೈಲ್ ಸ್ಥಳ ಮಹಜರಿ ವೇಳೆ ಪತ್ತೆಯಾಗಿತ್ತು. ಪೊಲೀಸರಿಗೆ ಸಿಗಬಾರದೆಂಬ ಉದ್ಧೇಶದಿಂದ ತನ್ನ ಪರ್ಸ್ ಹಾಗೂ ಮೊಬೈಲ್ ಎಸೆದಿದ್ದಾನೆ.

ಪ್ರವಾಸೋದ್ಯಮಕ್ಕೆ, ಸುಂದರ ತಾಣಕ್ಕೆ, ಅಡಿಕೆಗೆ, ಜೋಗದ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದ ಮಲೆನಾಡಿನ ತವರೂರು ಶಿವಮೊಗ್ಗದ ಮೇಲೆ ಭಯೋತ್ಪಾದಕರ ಕರಿ ನೆರಳು ಆವರಿಸಿಕೊಂಡಿದೆ. ನಾಗರೀಕರು ಸಹ ಭಯದ ವಾತಾವರಣದಲ್ಲೇ ಇದ್ದಾರೆ.

– ಗೋ.ವ.ಮೋಹನಕೃಷ್ಣ, ಪವರ್ ಟಿ.ವಿ, ಶಿವಮೊಗ್ಗ

RELATED ARTICLES

Related Articles

TRENDING ARTICLES