ಹುಬ್ಬಳ್ಳಿ: ರಾಯನಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಠದಾರಿ ಹತ್ಯೆ ನಡೆದು ತಿಂಗಳುಗಳು ಉರುಳಿದ ನಂತರ ಪೊಲೀಸರು ಮಾಡಿದ್ದ ಅನ್ಯಾಯದ ಪುಟಗಳು ಈಗ ಒಂದೊಂದಾಗಿ ಹೊರಬೀಳುವ ಸಮಯ ಶುರುವಾಗಿದೆ. ಹೌದು ಹುಬ್ಬಳ್ಳಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪೊಲೀಸರೆ ಆರೋಪಿಗಳಾಗುವ ಸಾಧ್ಯತೆ ಶುರುವಾಗಿದ್ದು ಪೊಲೀಸರ ಮೇಲೆ ದೂರು ದಾಖಲಿಸಿ ಮಂಪರು ಪರೀಕ್ಷೆ ನಡೆಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಕಳೆದ ಜುಲೈ ನಾಲ್ಕರಂದು ರಾತ್ರಿ 10.30 ಸುಮಾರಿಗೆ ರಾಯನಾಳ ಗ್ರಾಮ ಪಂಚಾಯ್ತಿ ಸದಸ್ಯ ದೀಪಕ್ ಪಠದಾರಿಯನ್ನ ಪ್ರೇಮ ವಿವಾಹ ಹಾಗೂ ರಾಜಕೀಯ ದ್ವೇಷದಿಂದ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ಈ ವೇಳೆ ದೀಪಕ್ ಪತ್ನಿ ಪುಷ್ಪಾ ಪಠದಾರಿ ತನ್ನದೇ ಕುಟುಂಬದ ಸದಸ್ಯರು ಸೇರಿದಂತೆ ಕೊಲೆ ಮಾಡಿದವರ ಮೇಲೆ ದೂರು ನೀಡಿದ್ದಳು. ಆದರೆ, ಪೊಲೀಸರು ಮಾತ್ರ ರಾತ್ರೋ ರಾತ್ರಿ ಕೆಲವರನ್ನ ವಶಕ್ಕೆ ಪಡೆದು ಕೇಸ್ ಅನ್ನೇ ಉಲ್ಟಾ ಮಾಡಲು ತಯಾರಿ ನಡೆಸಿಬಿಟ್ಟಿದ್ದರು.
ಈ ಕೊಲೆ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿ ಬಂದಿದ್ದ ಯಲ್ಲಪ್ಪ ಮೇಟಿ, ರುದ್ರಪ್ಪ ಮೇಟಿ ಹಾಗೂ ನಾಗರಾಜ್ ಹೆಗ್ಗಣ್ಣವರ ಇವರನ್ನ ಪೊಲೀಸರು ಮೊದಲು ವಶಕ್ಕೆ ಪಡೆದಿದ್ದರು. ನಂತರ ಸುಖಾಸುಮ್ಮನೆ ಬಿಟ್ಟು ಕಳುಹಿಸಿಬಿಟ್ಟಿದ್ದರು. ಹೀಗೆ ಕಳುಹಿಸುವ ವೇಳೆ ನಾಲ್ಕೈದು ಜನರನ್ನ ಅರೆಸ್ಟ್ ತೋರಿಸಿ ಪ್ರಮುಖ ಆರೋಪಿಗಳನ್ನ ರಕ್ಷಿಸುವ ಹುನ್ನಾರ ಕೂಡ ನಡೆಸಲಾಗಿತ್ತು ಎಂದು ದೀಪಕ್ ಸಹೋದರ ಸಂಜಯ್ ಆರೋಪಿಸಿದ್ದಾರೆ.
ಹಳೆ ಹುಬ್ಬಳ್ಳಿ ಪೊಲೀಸ್ ಕಾನ್ಸಟೇಬಲ್ ನಾಗರಾಜ್ ಕೆಂಚಣ್ಣವರ ಸೇರಿದಂತೆ ಇತರೆ ಪೊಲೀಸರು ಪ್ರಮುಖವಾಗಿ ಮೃತ ವ್ಯಕ್ತಿಯ ವಸ್ತುಗಳನ್ನ ಉದ್ದೇಶಪೂರ್ವಕವಾಗಿ ನಾಶ ಮಾಡಿದ್ದಾರೆ. ಅಲ್ಲದೆ ಕೊಲೆಗೆ ಬಳಸಿದ ಆಯುಧಗಳನ್ನ ಕೂಡ ಬದಲು ಮಾಡಲಾಗಿದೆ. ಇನ್ನು ಪೊಲೀಸ್ ಎಎಸ್ಐ ಕಾಳೆ ಎನ್ನುವ ಹಿಂದೆಯೇ ವ್ಯಾಟ್ಸಪ್ ನಲ್ಲಿ ದೀಪಕ್ ಗೆ ಹುಷಾರಾಗಿ ಇರುವಂತೆ ಧಮ್ಕಿ ಹಾಕಿದ್ದ ಅಂತನು ಕುಟುಂಬಸ್ತರು ಸಾಕ್ಷಿಗಳನ್ನ ಬಿಡುಗಡೆ ಮಾಡಿದ್ದಾರೆ.
ದೀಪಕ್ ಹತ್ಯೆ ಖಂಡಿಸಿ ಪತ್ನಿ ಪುಷ್ಪಾ ನ್ಯಾಯಕ್ಕಾಗಿ ಕೋರ್ಟ್ ಮೊರೆ ಕೂಡ ಹೋಗಿದ್ದರು. ಸದ್ಯ ಕೋರ್ಟ್ ನಲ್ಲಿ ನ್ಯಾಯ ಸಿಗುವ ಭರವಸೆ ಮುಡಿದ್ದು ಕಲಂ 355 ಅಡಿಯಲ್ಲಿ ಶಂಕಿತರ ಮೇಲೆ ವಿಚಾರಣೆ ನಡೆಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ದೀಪಕ್ ಕುಟುಂಬಸ್ತರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಿಂದ ಕೇಸ್ ಅನ್ನು ಸಿಐಡಿಗೆ ವರ್ಗಾವಣೆ ಮಾಡಬೇಕು ಹಾಗೂ ಆರೋಪಿತ ಪೊಲೀಸರು ಮಂಪರು ಪರೀಕ್ಷೆ ಮಾಡಬೇಕು ಅವಾಗ ನ್ಯಾಯ ಸಿಗಲಿದೆ ಎಂದು ಹೇಳುತ್ತಿದ್ದಾರೆ.
ಸದ್ಯ ಮೂವರು ಕೊಲೆ ಶಂಕಿತ ಆರೋಪಿಗಳನ್ನ ಉದ್ದೇಶಪೂರ್ವಕವಾಗಿ ರಕ್ಷಿಸಿ ಪೇಚಿಗೆ ಸಿಲುಕಿರುವ ತನಿಖಾ ತಂಡಕ್ಕೆ ಕೋರ್ಟ್ ನಲ್ಲಿ ಛೀಮಾರಿ ಹಾಕಲಾಗಿದ್ದು ಕೊಲೆ ಆರೋಪ ಹೊತ್ತಿರುವ ಮೂವರನ್ನು ತನಿಖೆ ಮಾಡುವಂತೆ ಸೂಚನೆ ನೀಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪೊಲೀಸರ ತಪ್ಪು ರುಜುವಾತು ಆದಲ್ಲಿ ಇವರು ಕೂಡ ಜೈಲು ಸೇರುವ ಸಂಭವ ಹೆಚ್ಚಿದ್ದು ಏನಾಗಲಿದೆ ಎಂದು ಕಾದು ನೋಡಬೇಕಿದೆ
ಮಲ್ಲಿಕ್ ಬೆಳಗಲಿ, ಪವರ್ ಟಿವಿ. ಹುಬ್ಬಳ್ಳಿ