ಬೆಂಗಳೂರು : ಅಕ್ರಮ ಭ್ರಷ್ಟಾಚಾರದಿಂದ ಸುದ್ದಿಯಾಗುವ ಬಿಡಿಎ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ.ಅದು ಬಿಡಿಎ ಸಿಬ್ಬಂದಿ ಹಾಗೂ ಆಫೀಸರ್ಸ್ ಮಾಡ್ತಿರೋ ಮೋಸ. ಹೌದು ಬಿಡಿಎ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರಿಗೆ ಸಿಗಬೇಕಿರುವ ಸೇವೆಗಳು ನಿಧಾನಗೊಂಡಿದೆ.ಇರೋ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರದೇ ಬೇಕಾಬಿಟ್ಟಿ ಕಚೇರಿಗೆ ಬರುತ್ತಿದ್ದಾರೆ. ಮಧ್ಯಾಹ್ನ 12 ಗಂಟೆ ಆದರು ಅಧಿಕಾರಿಗಳು ಕಚೇರಿಗೆ ಬರದೇ ಇರೋದು ಕೆಲಸ ಕಾರ್ಯಗಳು ವಿಳಂಬವಾಗ್ತಿವೆ,ಕಚೇರಿಯಲ್ಲಿರೋ ಖುರ್ಚಿಗಳು ಖಾಲಿ ಖಾಲಿ ಇರುತ್ತೆ.ಒಂದು ಕಡೆ ಕಮೀಷನರ್ ಕುಮಾರ್ ನಾಯಕ್ ಅವರೇ ಬಿಡಿಎ ಕಡೆ ಮುಖ ಮಾಡ್ತಿಲ್ಲ. ಹೀಗಾಗಿ ಇತರೆ ಸಿಬ್ಬಂದಿ ಆಫೀಸ್ ಗೆ ಬರದೆ ಕಳ್ಳಾಟವಾಡುತ್ತಿದ್ದಾರೆ.
ಬಿಡಿಎನಲ್ಲಿ ದಶಕದಿಂದ ಖಾಲಿಯಿರುವ ಹುದ್ದೆಗಳನ್ನು ತುಂಬದ ಕಾರಣ ಪ್ರಾಧಿಕಾರದ ನಾನಾ ವಿಭಾಗಗಳು ಬಿಕೋ ಎನ್ನುತ್ತಿವೆ. ಎರವಲು ಸೇವೆ ಹಾಗೂ ಗುತ್ತಿಗೆ ಅಡಿ ಕಾರ್ಯನಿರ್ವಹಿಸುವವರ ಮೇಲೆ ಹೆಚ್ಚು ಅವಲಂಬಿಸಬೇಕಾದ ಸ್ಥಿತಿ ನಿರ್ಮಾಣವಾಗಿದ್ದರೂ, ಗುಣಮಟ್ಟದ ಸೇವೆ ಲಭ್ಯವಾಗುತ್ತಿಲ್ಲ.ಇತ್ತೀಚೆಗೆ ಪ್ರಾಧಿಕಾರವು ಸೈಟ್ ಹಾಗೂ ಬಡಾವಣೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಿದೆ. ಸಾರ್ವಜನಿಕರಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಅಹವಾಲುಗಳು ಸಲ್ಲಿಕೆಯಾಗುತ್ತಿವೆ. ಬಡಾವಣೆ ಅಭಿವೃದ್ಧಿಗೆ ಒಪ್ಪಿಗೆ, ನಕ್ಷೆ ಮಂಜೂರಾತಿ, ಖಾತಾ ಪ್ರಮಾಣಪತ್ರ ಹಾಗೂ ಇನ್ನಿತರ ವಿಷಯಗಳಲ್ಲೂ ಅರ್ಜಿಗಳ ಮಹಾಪೂರವೇ ಹರಿದುಬರುತ್ತಿದೆ. ಇವುಗಳಿಗೆ ಕ್ಷಿಪ್ರವಾಗಿ ಸ್ಪಂದಿಸಲು ಸಾಧ್ಯವಾಗದ ಕಾರಣ ನಾಗರಿಕರಿಗೆ ನಾಳೆ ಬಾ.ಎಂಬ ಸಬೂಬು ಹೇಳಿ ಕಳುಹಿಸುವ ತಂತ್ರಕ್ಕೆ ಸಿಬ್ಬಂದಿ ವರ್ಗ ಶರಣಾಗಿದ್ದಾರೆ.ಈ ನಡುವೆ ಲೇಟ್ ಆಗಿ ಬರುವ ಮೂಲಕ ಸಾರ್ವಜನಿಕ ಕೆಲಸ ಕಾರ್ಯಗಳು ವಿಳಂಬವಾಗ್ತಿವೆ.
ಪ್ರಾಧಿಕಾರದಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ 985. ಈ ಪೈಕಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವವರು 280 ಮಾತ್ರ. ಸಿಬ್ಬಂದಿ ಕೊರತೆ ನೀಗಿಸಿಕೊಳ್ಳಲು ನಾನಾ ಇಲಾಖೆಗಳಿಂದ 260 ಮಂದಿ ಎರವಲು ಸೇವೆಗೆ ಪಡೆಯಲಾಗಿದ್ದು, ಇವರಲ್ಲಿ ಹೆಚ್ಚಿನವರು ಎಂಜಿನಿಯರ್‌ಗಳಾಗಿದ್ದಾರೆ. ಇವರಲ್ಲದೆ 100ಕ್ಕೂ ಹೆಚ್ಚಿನ ಡಾಟಾ ಆಪರೇಟರ್‌ಗಳನ್ನು ಗುತ್ತಿಗೆ ಅಡಿ ನೇಮಿಸಿಕೊಳ್ಳಲಾಗಿದೆ. ಆದರೂ, ಪ್ರತಿ ತಿಂಗಳು ಐದಾರು ಮಂದಿ ನಿವೃತ್ತಿ ಹೊಂದುತ್ತಿದ್ದು, ವಿಭಾಗಗಳಲ್ಲಿನ ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಿದೆ. ಇರೋ ಸಿಬ್ಬಂದಿ ನೆಟ್ಟಿಗೆ ಕರ್ತವ್ಯಕ್ಕೆ ಬರುತ್ತಿಲ್ಲ. ಈ ಬಗ್ಗೆ ಬಿಡಿಎ ಆಯುಕ್ತರು ಲೇಟ್ ಗೆ ಬರುವ ಸಿಬ್ಬಂದಿ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಯತ್ನ ನಡೆಯುತ್ತಿಲ್ಲ.ಬಿಡಿಎ ಆಯುಕ್ತರೇ ನೆಟ್ಟಿಗೆ ಆಫೀಸ್ ಬರುತ್ತಿಲ್ಲ ಇನ್ನೂ ಅಭಿವೃದ್ಧಿ ಎಲ್ಲಿಂದ ಜನ ಸಾಮಾಜಿಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಬಿಡಿಎ ಕಮಿಷನರ್ ಕುಮಾರ್ ನಾಯಕ್ ಪ್ರಾಧಿಕಾರ ದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಯಾವಾಗಲೂ ಬಂದು ಯಾವಾಗಲೂ ಹೋಗ್ತಾರೆ. ಇದನ್ನು ಬಂಡವಾಳ ಮಾಡಿಕೊಂಡ ಇತರೆ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮಹಾ ಕಳ್ಳಾಟ ನಡೆಸುತ್ತಿದ್ದಾರೆ. ಜಡ್ಡು ಹಿಡಿದಿರೋ ಬಿಡಿಎ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕಾದರೆ ಕಮಿಷನರ್ ಕಟ್ಟುನಿಟ್ಟಗಿ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ರೆ ಬೆಂಗಳೂರು ಅಭಿವೃದ್ಧಿ ಕುಸಿಯಲಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.