ಹಾಸನ : ಪ್ರತಿ ವರ್ಷದಂತೆ ಹಾಸನದ ಗಣಪತಿ ಪೆಂಡಾಲ್‌ನಲ್ಲಿ ಒಂದು ದಿನ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವರ್ಷ ಅದೇ ರೀತಿ ಇವತ್ತು ಪೂಜಾ ಕಾರ್ಯಕ್ರಮ ಮಾಡಿದ್ದೇವೆ. ರಾಜ್ಯದ ಎಲ್ಲಾ ವರ್ಗದ ಜನರಿಗೆ, ರೈತರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಿದ್ದೇವೆ. ಆ ದೃಷ್ಟಿಯಲ್ಲಿ ಇವತ್ತು ಪೂಜೆ ಮಾಡಿದ್ದೇವೆ ಅಷ್ಟೇ. ಸ್ಪೆಷಲ್ ಅಂತ ಏನು ಇಲ್ಲ, ಪ್ರತಿವರ್ಷ ಬಂದು ಪೂಜೆ ಮಾಡ್ತಿವಿ ಎಂದರು.
ಇನ್ನು, ಹಾಸನ ಟಿಕೆಟ್ ಫೈಟ್ ಬಗ್ಗೆ ಕೇಳುತ್ತಿದ್ದಂತೆ ಗರಂ ಆದ ಸಂಸದ ಪ್ರಜ್ವಲ್ ರೇವಣ್ಣ ನಾನು ರಿಪೋರ್ಟ್‌ಗಳ ಚಿಂತನೆಗೆ ಉತ್ತರ ಕೊಡಲು ಆಗಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ. ಟಿಕೆಟ್ ವಿಚಾರದಲ್ಲೂ ಯಾವುದೇ ಗೊಂದಲವಿಲ್ಲ. ನಮ್ಮ ಕುಟುಂಬದ ವತಿಯಿಂದ ಇಂದು ಪೂಜಾ ಕಾರ್ಯಕ್ರಮ ಆಯೋಜಿಸಿದ್ದೇವೆ, ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಅವರೇ ಬರಬೇಕು, ಇವರೇ ಬರಬೇಕು ಅನ್ನೋದು ಏನು ಇಲ್ಲ. ಒಂದು ಕುಟುಂಬದಿಂದ ಆಯೋಜಿಸಿರುವ ಪೂಜಾ ಕಾರ್ಯಕ್ರಮ ಇದು, ಭಿನ್ನಮತ ಎಲ್ಲಿ ಬಂತು, ಭಿನ್ನಮತ ಪ್ರಶ್ನೆ ಇಲ್ಲ ಎಂದು ಹೇಳಿದರು.
ಅದಲ್ಲದೇ ಮುಂದಿನ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ಕುಮಾರಸ್ವಾಮಿ ವಹಿಸುತ್ತಿದ್ದರೆ. ಸಂಸದ, ಎಂಎಲ್‌ಸಿ ಶಕ್ತಿ ಅಷ್ಟು ಕುಂದಿದೆ ಎಂಬ ಶಾಸಕ ಪ್ರೀತಂಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅವನು ಯಾವನು ಅಂತ ನಾನು ಉತ್ತರ ಕೊಡಲಿ. ಅವರ ಬಿಟ್ಟಾಕಿ ನಾನು ಅದುಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಅವನು ದಿನ ಬೆಳಿಗ್ಗೆ ಮಾತನಾಡೋದು, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ಅವರು ಭ್ರಮೆಯಲ್ಲಿದ್ದಾರೆ, ಜನರು ತೋರಿಸುತ್ತಾರೆ. ಇಂತಹವರು ಬಹಳಷ್ಟು ಜನ ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದಾರೆ. ಕುಮಾರಣ್ಣನೇ ಸವಾಲು ಸ್ವೀಕಾರ ಮಾಡಿದ್ದೇವೆ ಎಂದರು.