ಬೆಂಗಳೂರು : ರಾಜಕಾರಣಿಗಳು, ಬಡವರು, ಶ್ರೀಮಂತರು ಯಾರೇ ಇರಲಿ ಒತ್ತುವರಿ ತೆರವು ನಿಶ್ಚಿತ. ಬೆಂಗಳೂರು ನಗರದಾದ್ಯಂತ ಮುಂದಿನ ದಿನಗಳಲ್ಲಿ ಒತ್ತುವರಿ ತೆರವುಗೊಳಿಸಲಾಗುವುದು ಎಂದು ಸಚಿವ ಆರ್ ಅಶೋಕ್ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸದ್ಯಕ್ಕೆ ಎರಡು ವಲಯಗಳಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಬಡವರು ಮಾಡಿರುವ ಒತ್ತುವರಿ ತೆರವು ಮಾಡಲು ಮಾಧ್ಯಮದವರು ಬಿಡುತ್ತಿಲ್ಲ. ಶ್ರೀಮಂತರು ಮಾಡಿರುವ ಒತ್ತುವರಿ ತೆರವಿಗೆ ಕಾಂಗ್ರೆಸ್ನವರು ಬಿಡುತ್ತಿಲ್ಲ ಎಂದರು. ಮುಂದಿನ ದಿನಗಳಲ್ಲಿ ರಾಜಕಾರಣಿಗಳೇ ಆಗಿರಲಿ, ಬಡವರೇ ಆಗಿರಲಿ, ಶ್ರೀಮಂತರೇ ಆಗಿರಲಿ ಎಲ್ಲವನ್ನು ಒತ್ತುವರಿ ತೆರವು ಮಾಡಲಾಗುವುದು. ನಿರಂತರವಾಗಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ನಿರ್ಧಾರ ಮಾಡಲಾಗಿದೆ.
ಇನ್ನು, ಬಡವರಿಗೆ ನೆರವು ನೀಡುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಒತ್ತುವರಿ ತೆರವು ವಿಚಾರದಲ್ಲಿ ರಾಜಕಾರಣ ನಡೆಸಲಾಗುತ್ತದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶೋಕ್, ಎಲ್ಲ ವಿಚಾರದಲ್ಲೂ ರಾಜಕಾರಣ ಸಹಜ. ಬಡವ ಎನ್ನುವ ಕಾರಣಕ್ಕೆ ಒತ್ತುವರಿ ತೆರವು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲವನ್ನೂ ತೆರವುಗೊಳಿಸಿ ಬಡವ ಎಂಬ ಕಾರಣಕ್ಕೆ ತೆರವು ಮಾಡದೆ ಬಿಡಲು ಆಗುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದರು.