ಬೆಂಗಳೂರು : ನಗರಸಭೆ, ಪುರಸಭೆ ಮತ್ತು ಇತರೆ ಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ 11,133 ಪೌರಕಾರ್ಮಿಕರಿಗೆ ವಿಶೇಷ ನೇಮಕಾತಿ ನಿಯಮಗಳ ಅಡಿಯಲ್ಲಿ ಸರ್ಕಾರಿ ನೌಕರರೆಂದು ನೇಮಕಾತಿ ಮಾಡುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ. ಈ ಮೂಲಕ ಕಾಮನ್ ಮ್ಯಾನ್ ಮುಖ್ಯಮಂತ್ರಿ ಎಂದೇ ಜನಮೆಚ್ಚುಗೆ ಪಡೆದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ರಾಜ್ಯ ಸರ್ಕಾರವು ಬಡವರ ಪರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಸಾಮಾಜಿಕ ನ್ಯಾಯದ ದಿಗ್ವಿಜಯ ಯಾತ್ರೆಯನ್ನು ಕರ್ನಾಟಕದ ಬಿಜೆಪಿ ಸರಕಾರ ಮುಂದುವರಿಸಿದೆ. ಈ ಪ್ರಸ್ತಾವಕ್ಕೆ ಅನುಮೋದನೆ ನೀಡಿದ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಸದಸ್ಯರೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಈ ನೌಕರರು ಈಗ ರೂ.17,000-28,980 ವೇತನ ಶ್ರೇಣಿ ಅಡಿಯಲ್ಲಿ ಸೇವೆ ಸಲ್ಲಿಸುವಂತೆ ಅವಕಾಶ ಕಲ್ಪಿಸಲಾಗಿದೆ. 11,133 ಪೌರ ಕಾರ್ಮಿಕ ಖಾಯಮಾತಿಯಾಗಿದ್ದು ರಾಜ್ಯದ ಇತಿಹಾಸದಲ್ಲಿದು ಮೊದಲ ಬಾರಿ ಎಂದು ತಿಳಿಸಿದ್ದಾರೆ.