Monday, December 23, 2024

ರೈತರಿಗೆ ಸಾಲ ನೀಡಿ ಫೈನಾನ್ಸ್ ಕಂಪನಿಗಳ ಕಳ್ಳಾಟ..!

ಹುಬ್ಬಳ್ಳಿ : ಖಾಸಗಿ ಫೈನಾನ್ಸಿಯಲ್ ಕಂಪನಿಯೊಂದು ಕನ್ನ ಹಾಕಿ, ಅಮಾಯಕ ರೈತರು ಕೋರ್ಟ್ ಕಟಕಟೆ ಹತ್ತುವಂತೆ ಮಾಡಿದೆ. ಸಿಂದಗಿಯ ರೈತ ಸಿದ್ದಪ್ಪ ಪಡಶೆಟ್ಟಿ ಎನ್ನುವವರು ಪೂನಾವಾಲ ಫೈನಾನ್ಸ್‌ನಲ್ಲಿ 5 ಲಕ್ಷ ರೂಪಾಯಿ ಲೋನ್ ತೆಗೆದುಕೊಂಡಿದ್ದರು. ಪಡೆದ ಸಾಲವನ್ನು ಕ್ಲಿಯರ್ ಮಾಡುತ್ತಿದ್ದಂತೆ, ನೀವು ಮತ್ತೆ ಲೋನ್ ತೆಗೆದುಕೊಳ್ಳಿ ಎಂದು ಬೇಡಿಕೆಯನ್ನಿಟ್ಟಿತ್ತು.

ಆದರೆ, ಸಿದ್ದಪ್ಪ ಬೇಡ ಎಂದು ತಿರಸ್ಕಾರ ಮಾಡಿದ್ದಾರೆ. ಹೀಗಿದ್ದರೂ ಫೈನಾನ್ಸ್ ಕಂಪನಿ ಸಿದ್ದಪ್ಪನಿಗೆ ತಿಳಿಯದಂತೆ 75 ಸಾವಿರ ರೂಪಾಯಿಯನ್ನು ಜಮಾ ಮಾಡಿದೆ. ನಂತರ, ಸಮಸ್ಯೆಯನ್ನು ಸರಿ ಮಾಡಿರುವುದಾಗಿ‌ ಸಿಬ್ಬಂದಿ ನಾಟಕವಾಡಿದ್ದಾರೆ. ಇದಾದ 4 ವರ್ಷಗಳ ಬಳಿಕ 5 ಲಕ್ಷ ಲೋನ್ ತುಂಬುವಂತೆ ಕೋರ್ಟ್ ನೋಟಿಸ್ ನೀಡಿದ್ದು, ಸಿದ್ದಪ್ಪನಿಗೆ ಆಕಾಶವೇ ಮೇಲೆ ಬಿದ್ದಂತಾಗಿದೆ.

ಈ ಬಗ್ಗೆ ಹುಬ್ಬಳ್ಳಿ ಶಾಖೆಗೆ ಭೇಟಿ ನೀಡಿದ ಸಿದ್ದಪ್ಪನ ಮಾತಿಗೆ ಸೊಪ್ಪು ಹಾಕದ ಸಿಬ್ಬಂದಿ ಲೋನ್ ಕಟ್ಟಬೇಕು ಅಂತ ಧಮ್ಕಿ ಹಾಕಿದ್ದಾರೆ. ಇದರಿಂದಾಗಿ ಸಿದ್ದಪ್ಪ ಸ್ಥಳೀಯ ರೈತ ಸಂಘಟನೆಗಳ ಸಹಾಯ ಪಡೆದು ಈಗ ಫೈನಾನ್ಸ್ ಕಚೇರಿ ಮುಂದೆ ಧರಣಿಗೆ‌ ಮುಂದಾಗಿದ್ದಾರೆ. ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಫೈನಾನ್ಸ್ ತನ್ನ ತಪ್ಪು ಒಪ್ಪಿಕೊಂಡಿದೆ. ಈ ತಿಂಗಳ 26 ರಂದು ನಡೆಯುವ ಕೋರ್ಟ್ ವಿಚಾರಣೆಯಲ್ಲಿ ಕೇಸ್ ಹಿಂಪಡೆಯುವ ಭರವಸೆ ನೀಡುತ್ತಿದೆ.‌

ಒಟ್ನಲ್ಲಿ ಭೂಮಿತಾಯಿಯ ಸೇವೆ ಮಾಡಿ ಜನರ ಹಸಿವನ್ನು ತೀರಿಸುವ ಈ ರೈತರಿಗೆ, ಖಾಸಗಿ ಫೈನಾನ್ಸ್ ಸಂಸ್ಥೆಗಳು ತಮ್ಮ ಲಾಭಕ್ಕಾಗಿ ರೈತರಿಗೆ ಯಾವ ರೀತಿ ಮೋಸ ಮಾಡುತ್ತಿವೆ ಎನ್ನುವುದಕ್ಕೆ ಈ ಸ್ಟೋರಿಯೇ ಸಾಕ್ಷಿ.

ಮಲ್ಲಿಕ್ ಬೆಳಗಲಿ, ಪವರ್ ಟಿವಿ, ಹುಬ್ಬಳ್ಳಿ

RELATED ARTICLES

Related Articles

TRENDING ARTICLES