ಬೆಂಗಳೂರು : ಉದ್ಯಾನನಗರಿಯ ಬಹುತೇಕ ರಸ್ತೆಗಳಲ್ಲಿ ಬಾವಿಯಂತೆ ತೆರೆದುಕೊಂಡ ಗುಂಡಿಗಳು. ಜೀವವನ್ನು ಕೈಯಲ್ಲಿ ಬಿಗಿ ಹಿಡಿದು ಡ್ರೈವ್ ಮಾಡುತ್ತಿರುವ ಚಾಲಕರು. ಇದಕ್ಕೆಲ್ಲಾ ಫುಲ್ ಸ್ಟಾಪ್ ಹಾಕಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಿದ್ದು, ನಗರದಲ್ಲಿ ಬಾಕಿಯಿದ್ದ 18,366 ಗುಂಡಿಗಳಲ್ಲಿ15,538 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು ಬಾಕಿ ಇರುವ 2828 ಗುಂಡಿಗಳನ್ನು ಯಾವಾಗ ಮುಚ್ತೀರಾ ಅಂತ ಹೈಕೋಟ್೯ ಕೂಡ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿತ್ತು.ಇದ್ರಿಂದ ನಗರದಲ್ಲಿ ಇರುವ ಎಲ್ಲಾ ರಸ್ತೆಗುಂಡಿಗಳನ್ನು, ಒಂದು ವಾರದೊಳಗೆ ಮುಚ್ಚಲಾಗುತ್ತದೆ ಎಂದು ಅಧಿಕಾರಿಗಳು ಮತ್ತೆ ಸಬೂಬು ನೀಡ್ತಿದ್ದಾರೆ.
ಇದೇ ವೇಳೆ ಪಾಲಿಕೆ ಹೈಕೋರ್ಟ್‌ಗೆ ಕೂಡ ರಸ್ತೆಗಳ ಗುಂಡಿ ಮುಚ್ಚಿರುವ ಲೆಕ್ಕವನ್ನೂ ನೀಡಿದೆ. ಈಗಾಗಲೇ ಆರ್.ಆರ್.ನಗರ, ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ಬೆಂಗಳೂರು ಪಶ್ಚಿಮ ವಲಯಗಳಲ್ಲಿ ಪ್ಯಾಚ್ ಮಿಕ್ಸ್ ಪ್ಲಾಂಟ್ ತೆರೆಯಲಾಗಿದೆ. ಕಣ್ಣೂರಿನಲ್ಲಿ ಪಾಲಿಕೆಯ ಸ್ವಂತ ಪ್ಯಾಚ್ ಮಿಕ್ಸ್ ಪ್ಲಾಂಟ್ ಇತ್ತು.ಇದೀಗ ನಗರದ ಎಲ್ಲಾ ವಲಯಗಳಿಗೂ ಕೂಡ ಪ್ಯಾಚ್ ಮಿಕ್ಸ್ ಪ್ಲ್ಯಾಂಟ್ ಪ್ರಾರಂಭಿಸಲಾಗಿದೆ.ಬಾಡಿಗೆ ರೂಪದಲ್ಲಿ ರಸ್ತೆಗುಂಡಿ ಮುಚ್ಚುವ ಸಲುವಾಗಿ ಪ್ಲ್ಯಾಂಟ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಜಲ್ಲಿ, ಕಲ್ಲು, ಸಿಮೆಂಟ್, ಮರಳು, ಮಿಕ್ಸ್ ಬೇಗನೆ ಆಗಲಿದ್ದು, ಗುಂಡಿಗಳು ಮುಚ್ಚುವ ಕೆಲಸ ಕೂಡ ತ್ವರಿತಗತಿಯಲ್ಲಿ ನಡೆಯಲಿದೆ ಅಂತ ಬಿಬಿಎಂಪಿ ಭರವಸೆ ನೀಡ್ತಿದೆ.
ಇದೇ ವೇಳೆ ಕಳಪೆ ಕಾಮಗಾರಿ ತಡೆಗೆ ಕೂಡ ಕಠಿಣ ಕ್ರಮ ತೆಗೆದುಕೊಂಡಿರುವ ಪಾಲಿಕೆ ಕಾಮಗಾರಿಗಳ ಗುಣಮಟ್ಟ ಪರೀಕ್ಷೆ ಕಡ್ಡಾಯ ಮಾಡಿದೆ. ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಯಾವುದೇ ಕಾಮಗಾರಿಗೆ ಗುಣ ಭರವಸೆ ಸರ್ಟಿಫಿಕೇಟ್ ಕಡ್ಡಾಯವಾಗಿದೆ. ಮುಂದೆ ನಗರದಲ್ಲಿ ಗುಣಮಟ್ಟದ ರಸ್ತೆ ಮತ್ತು ಕಾಮಗಾರಿಗಳು ಕಾಣುವ ನಿರೀಕ್ಷೆಯನ್ನೂ ಹೊಂದಿದ್ದಾರೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು.