Wednesday, January 22, 2025

ಮಂಡ್ಯದಲ್ಲಿ ತಾರಕಕ್ಕೇರಿದ ಆಣೆ-ಪ್ರಮಾಣ ಪಾಲಿಟಿಕ್ಸ್

ಮಂಡ್ಯ : ಸಕ್ಕರೆನಾಡು ಮಂಡ್ಯ ಜಿಲ್ಲೆಯಲ್ಲಿ ಕಳೆದ ಲೋಕಸಭಾ ಚುನಾಣೆಯಿಂದ ಆರಂಭವಾಗಿರುವ ಸಂಸದೆ ಸುಮಲತಾ ಅಂಬರೀಶ್ ಹಾಗೂ ದಳಪತಿಗಳ ವಾರ್ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಒಂದಲ್ಲಾ ಒಂದು ವಿಚಾರಕ್ಕೆ ಪರಸ್ಪರ ಇಬ್ಬರ ನಡುವೆ ಮಾತಿನ ಸಮರ ನಡೆಯುತ್ತಾನೆ ಇದೆ. ಇದೀಗ ಸಂಸದೆ ಸುಮಲತಾ ಅಂಬರೀಶ್ ಅವರು, ಜೆಡಿಎಸ್‌ ಶಾಸಕರು ಎಲ್ಲಾ ಅಭಿವೃದ್ಧಿ ಕಾಮಗಾರಿಗಳಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆಂಬ ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಶಾಸಕರು ಸಹ ವಾಗ್ದಾಳಿ ನಡೆಸಿದ್ರು. ಇದಾದ ನಂತರ ಸುಮಲತಾ ಅಂಬರೀಶ್​, ಶಾಸಕ ಸಿ.ಎಸ್.ಪುಟ್ಟರಾಜು ಕ್ರಿಮಿನಲ್ ಅಂತವರ ಜೊತೆ ನಾನು ಮಾತು ಕೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರ ಎಂಎಲ್‌ಎ ಸರ್ಟಿಫಿಕೇಟ್ ತೆಗೆದುಕೊಂಡು ಮೇಲುಕೋಟೆ ದೇವಸ್ಥಾನಕ್ಕೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಜೆಡಿಎಸ್‌ ಶಾಸಕರಿಗೆ ಸವಾಲು ಹಾಕಿದ್ರು.

ಇದೀಗ ಈ ಸವಾಲನ್ನು ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಸ್ವೀಕಾರ ಮಾಡಿ, ದಿನಾಂಕ ನಿಗದಿ ಮಾಡುವಂತೆ ಸುಮಲತಾ ಅಂಬರೀಶ್‌ಗೆ ಪ್ರತಿ ಸವಾಲು ಹಾಕಿದ್ದಾರೆ. ಇಂದು ಮೇಲುಕೋಟೆಗೆ ತೆರಳಿದ ಪುಟ್ಟರಾಜು ಚಲುವನಾರಾಯಣಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿದ್ರು. ರಾಜಕೀಯದಿಂದ ನಾನು ಏನು ಪಡೆದುಕೊಳ್ಳಲು ಬಂದಿಲ್ಲ. ಅವರ ಬಳಿ ಯಾವ ದಾಖಲೆ ಇದೆ ತರಲಿ. ಮೇಲುಕೋಟೆಗೆ ಬರಲು ಅವರೇ ದಿನಾಂಕ ನಿಗದಿ ಮಾಡಲಿ ನಾನು‌ ಬರ್ತೀನಿ ಎಂದು ಸುಮಲತಾ ಅಂಬರೀಶ್ ಸವಾಲಿಗೆ ಪುಟ್ಟರಾಜು ಮರು ಸವಾಲು ಹಾಕಿದ್ದಾರೆ.

ಒಟ್ಟಾರೆ ಸಂಸದೆ ಸುಮಲತಾ ಅಂಬರೀಶ್ ಹಾಗೂ ದಳಪತಿಗಳ ನಡುವಿನ ಟಾಕ್ ಫೈಟ್ ಇದೀಗ ಮೇಲುಕೋಟೆ ಚೆಲುವನಾರಾಯಣಸ್ವಾಮಿ ಸನ್ನಿಧಿಗೆ ತಲುಪಿದ್ದು, ಪುಟ್ಟರಾಜು ಮರು ಸವಾಲಿಗೆ ಸುಮಲತಾ ಅಂಬರೀಶ್ ಏನು ಹೇಳ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ

RELATED ARTICLES

Related Articles

TRENDING ARTICLES